×
Ad

ಜೆಟ್ ಏರ್‌ವೇಸ್ ವಿಮಾನದಲ್ಲಿ ನಿಗೂಢ ಪೈಲಟ್!

Update: 2016-09-18 09:09 IST

ಹೊಸದಿಲ್ಲಿ, ಸೆ.18: ಹಿಂದಿನ ದಿನಗಳಲ್ಲಿ ಕಳ್ಳ ಪ್ರಯಾಣಿಕರು ಹಡಗುಗಳ ಮೂಲೆಯಲ್ಲಿ ಅಡಗಿ ಪ್ರಯಾಣಿಸುತ್ತಿದ್ದರು. ಆದರೆ ಭಾರತದ ಪ್ರಮುಖ ಏರ್‌ಲೈನ್ಸ್ ಕಂಪೆನಿಯ ಕಮಾಂಡರ್ ಒಬ್ಬರು, ತಾವು ವಿಮಾನದಲ್ಲಿ ಇದ್ದ ಬಗ್ಗೆ ಯಾವ ಸುಳಿವು ಅಥವಾ ಪುರಾವೆಗೂ ಅವಕಾಶ ಇಲ್ಲದಂತೆ ಕಾಕ್‌ಪಿಟ್‌ನಲ್ಲಿ ಎರಡು ಬಾರಿ ಪ್ರಯಾಣಿಸಿದ್ದು ಮಾತ್ರವಲ್ಲದೇ ಒಮ್ಮೆ ವಿಮಾನ ಚಾಲನೆಯನ್ನೂ ಮಾಡಿದ್ದರು ಎಂಬ ಅಂಶ ಇದೀಗ ಬಹಿರಂಗವಾಗಿದೆ.
ಈ ನಿಗೂಢ ಪೈಲಟ್‌ನ ಸಾಹಸ ಕೃತ್ಯ ವೈಮಾನಿಕ ವಲಯದಲ್ಲಿ ದಿಗ್ಭ್ರಮೆ ಹುಟ್ಟಿಸಿದೆ. ಜೆಟ್ ಏರ್‌ವೇಸ್‌ನ ಹಿರಿಯ ಕಮಾಂಡರ್ ಅವರನ್ನು ಈ ಸಂಬಂಧ ವಿಮಾನಯಾನದ ಮಹಾನಿರ್ದೇಶಕರು ಪ್ರಶ್ನಿಸಿದ್ದಾರೆ. ಮೊದಲ ಪ್ರಕರಣದಲ್ಲಿ ವಿಮಾನ ಚಾಲನೆಯ  ಪರವಾನಿಗೆ ಇಲ್ಲದೇ ದಿಲ್ಲಿ - ಬೆಂಗಳೂರು- ದಿಲ್ಲಿ ವಿಮಾನವನ್ನು ಚಲಾಯಿಸಿ, ತಾವು ಚಲಾವಣೆ ಮಾಡಿದ ಬಗ್ಗೆ ಇದ್ದ ದಾಖಲೆಗಳನ್ನು ಅಳಿಸಿ ಹಾಕಿದ್ದಾರೆ. ಇದೇ ಪೈಲಟ್ ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗುವ ಸಲುವಾಗಿ ದಿಲ್ಲಿಯಿಂದ ಬೆಂಗಳೂರಿಗೆ ಕಳ್ಳ ಪ್ರಯಾಣ ಬೆಳೆಸಿದ್ದಾರೆ ಎಂದು ಆಪಾದಿಸಲಾಗಿದೆ.
"ಇದನ್ನು ಗಂಭೀರ ಭದ್ರತಾ ಲೋಪ ಎಂದು ನಾವು ಪರಿಗಣಿಸಿದ್ದೇವೆ. ಯಾವುದೇ ಸುಳಿವನ್ನೂ ಬಿಡದೇ ಹೇಗೆ ದಾಖಲೆಗಳನ್ನು ಅಳಿಸಿ ಹಾಕಬಹುದು ಎನ್ನುವುದಕ್ಕೆ ಇದು ಒಳ್ಳೆಯ ಪ್ರಕರಣ. ಎರಡೂ ಬಾರಿ ಆತ ಕಾಕ್‌ಪಿಟ್‌ನಲ್ಲಿ ಇದ್ದ ಎನ್ನುವುದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣವನ್ನು ಬ್ಯೂರೊ ಆಫ್ ಸಿವಿಲ್ ಏವಿಯೇಷನ್‌ಗೆ ವರ್ಗಾಯಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News