ಉರಿ ದಾಳಿಯಲ್ಲಿ ಪಾಕ್ ಪಾತ್ರ: ವಿಶ್ವಸಂಸ್ಥೆಯಲ್ಲಿ ಉಲ್ಲೇಖಿಸಲು ಭಾರತ ನಿರ್ಧಾರ
ಹೊಸದಿಲ್ಲಿ, ಸೆ.19: ಕಾಶ್ಮೀರದ ಉರಿ ಪ್ರಾಂತ್ಯದಲ್ಲಿ ಸೇನಾ ಶಿಬಿರದ ಮೇಲೆ ಉಗ್ರವಾದಿಗಳ ದಾಳಿಯಲ್ಲಿ 17 ಮಂದಿ ಸೇನಾ ಯೋಧರು ಸಾವನ್ನಪ್ಪಿರುವ ಘಟನೆಯನ್ನು ವಿಶ್ವಸಂಸ್ಥೆಯ 71ನೇ ಸಾಮಾನ್ಯ ಅಧಿವೇಶನದಲ್ಲಿ ಪ್ರಸ್ತಾಪಿಸಲು ಭಾರತ ನಿರ್ಧರಿಸಿದ್ದು ಈ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿರುವುದನ್ನು ಒತ್ತಿ ಹೇಳಲಿದೆ. ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆಯ 71ನೇ ಅಧಿವೇಶನಲ್ಲಿ ವಿಷಯ ಪ್ರಸ್ತಾವಿಸಲಿದ್ದು ಪ್ರಕರಣದಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಒತ್ತಿ ಹೇಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾರ್ಕ್ ಸಮಿತಿಯ ಸಭೆಯಲ್ಲಿ ಪ್ರಧಾನಿ ಪಾಲ್ಗೊಳ್ಳುವ ಬಗ್ಗೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದೂ ಮೂಲಗಳು ತಿಳಿಸಿವೆ. ಉರಿಯಲ್ಲಿ ಉಗ್ರರು ನಡೆಸಿದ ದಾಳಿಯ ಬಳಿಕ ಭಾರತವು ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ತೀವ್ರವಾಗಿ ಖಂಡಿಸಿತ್ತು. ಪಾಕಿಸ್ತಾನವನ್ನು ಭಯೋತ್ಪಾದಕ ದೇಷ ಎಂದು ಪರಿಗಣಿಸಿ ಅದನ್ನು ವಿಶ್ವಸಮುದಾಯದ ಮುಂದೆ ಏಕಾಂಗಿಯಾಗಿಸುವ ಪ್ರಯತ್ನದ ಅಂಗವಾಗಿ ಗೃಹ ಸಚಿವ ರಾಜನಾಥ್ ಸಿಂಗ್ ನಿನ್ನೆ ನೀಡಿರುವ ಹೇಳಿಕೆಯಲ್ಲಿ - ಉರಿಯಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಭೀತಿವಾದಿಗಳು ಅತ್ಯುತ್ತಮ ಮಟ್ಟದ ತರಬೇತಿ ಪಡೆದಿದ್ದು, ಆಧುನಿಕ ಶಸ್ತ್ರಾಸ್ತ್ರ ಹೊಂದಿದ್ದರು ಎಂದು ತಿಳಿಸಿದ್ದರು. ಈ ಹೇಯ ಕೃತ್ಯ ಎಸಗಿರುವವರ ಸಹಾಯಕ್ಕೆ ನಿಂತವರನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ಪ್ರಧಾನಿ ಕೂಡಾ ಹೇಳಿದ್ದಾರೆ. ಘಟನೆಯ ಹಿಂದೆ ಜೈಶ್-ಎ-ಮುಹಮ್ಮದ್ ಸಂಘಟನೆಯ ಕೈವಾಡ ಇರುವ ಬಗ್ಗೆ ಸುಳಿವು ನೀಡಿರುವ ಭಾರತದ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕ ಲೆ.ಜ. ರಣ್‌ಬೀರ್ ಸಿಂಗ್, ದುಷ್ಟಶಕ್ತಿಗಳಿಗೆ ಮರೆಯಲಾಗದಂತಹ ಉತ್ತರ ನೀಡಲಾಗುತ್ತದೆ ಎಂದಿದ್ದಾರೆ. ಆದರೆ ಘಟನೆಯಲ್ಲಿ ತನ್ನ ಪಾತ್ರವಿದೆ ಎಂಬ ಭಾರತದ ಹೇಳಿಕೆಯನ್ನು ಪಾಕಿಸ್ತಾನ ಸಾರಾಸಗಟಾಗಿ ತಳ್ಳಿಹಾಕಿದೆ. ಪ್ರತೀ ಬಾರಿ ಉಗ್ರವಾದಿಗಳ ದಾಳಿ ನಡೆದಾಗಲೂ ಪಾಕಿಸ್ತಾನದತ್ತ ಬೊಟ್ಟು ಮಾಡುವುದು ಭಾರತದ ಸಂಪ್ರದಾಯವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ನಫೀಝ್ ಝಕಾರಿಯಾ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಹಲವಾರು ಬಾರಿ ಭಾರತ ಇದೇ ರೀತಿ ಪಾಕಿಸ್ತಾನವನ್ನು ದೂಷಿಸಿತ್ತು. ಆದರೆ ಬಳಿಕ ಆ ಘಟನೆಗಳಿಗೆ ಭಾರತೀಯರೇ ಕಾರಣ ಎಂದು ಸಾಬೀತಾಗಿತ್ತು ಎಂದವರು ಪ್ರತಿಕ್ರಿಯೆ ನೀಡಿದ್ದಾರೆ.