ಒಡೆದ ಮನೆಯಾದ ಪ.ಬಂಗಾಲ ಕಾಂಗ್ರೆಸ್: ಹೆಚ್ಚಿನ ನಾಯಕರು ಟಿಎಂಸಿಗೆ ಸೇರ್ಪಡೆ

Update: 2016-09-19 14:17 GMT

ಕೋಲ್ಕತಾ,ಸೆ.19: 1998ರಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷದ ಜನನಕ್ಕೆ ಕಾರಣವಾದ ಕಾಂಗ್ರೆಸ್ ವಿಭಜನೆಯ ಬಳಿಕ ಇದೀಗ ಪಶ್ಚಿಮ ಬಂಗಾಳದಲ್ಲಿ ಪಕ್ಷವು ಮತ್ತೆ ಒಡೆದ ಮನೆಯಾಗಿದೆ. ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಮಾನಸ್ ಭುನಿಯಾ ಅವರು ಸೋಮವಾರ ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಐದು ಬಾರಿಯ ಶಾಸಕ ಮೊಹಮ್ಮದ್ ಸೊಹ್ರಾಬ್ ಅವರೂ ಕಾಂಗ್ರೆಸ್ ತೊರೆದು ಟಿಎಂಸಿಗೆ ಸೇರಿದ್ದಾರೆ.

ಇತರ ಕಾಂಗ್ರೆಸ್ ನಾಯಕರಾದ ಖಾಲಿದ್ ಇಬಾದುಲ್ಲಾ, ಮನೋಜ ಪಾಂಡೆ, ಅಸಿತ್ ಮಜುಂದಾರ್ ಹಾಗೂ ಇತರ ಕಿರಿಯ ನಾಯಕರು ಮತ್ತು ಕಾರ್ಯಕರ್ತರೂ ಹಿರಿಯ ಟಿಎಂಸಿ ನಾಯಕರ ಉಪಸ್ಥಿತಿಯಲ್ಲಿ ಆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಮಮತಾ ಬ್ಯಾನರ್ಜಿಯವರ ನಿಜವಾದ ಕಾಂಗ್ರೆಸ್ ಪಕ್ಷವನ್ನು ಸೇರಲು ರಾಜ್ಯ ಘಟಕದ ಅಧ್ಯಕ್ಷ ಆಧಿರ್ ಮತ್ತು ಪ್ರತಿಪಕ್ಷ ನಾಯಕ ಮನ್ನಾನ್‌ರಂತಹ ನಿರುಪಯುಕ್ತ ನಾಯಕರ ಕಾಂಗ್ರೆಸ್‌ನ್ನು ತಾನು ತೊರೆದಿದ್ದಾಗಿ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಸಬಂಗ್‌ನಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಭುನಿಯಾ ಸುದ್ದಿಗಾರರಿಗೆ ತಿಳಿಸಿದರು.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಪ್ರದೇಶ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಓಂಪ್ರಕಾಶ ಮಿಶ್ರಾ ಅವರು, ಭುನಿಯಾ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ್ತು ತನ್ನ ಶಾಸಕ ಸ್ಥಾನಕ್ಕೆ ತಕ್ಷಣ ರಾಜೀನಾಮೆ ಸಲ್ಲಿಸಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News