×
Ad

ಟೆಕ್ಕಿ ಕೊಲೆ ಆರೋಪಿ ರಾಮಕುಮಾರ್ ಆತ್ಮಹತ್ಯೆ ಕುರಿತು ತನಿಖೆಗೆ ಎಸ್‌ಎಚ್‌ಆರ್‌ಸಿ ಆದೇಶ

Update: 2016-09-19 19:58 IST

ಚೆನ್ನೈ,ಸೆ.19: ಇಲ್ಲಿಯ ರೈಲು ನಿಲ್ದಾಣದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಸ್ವಾತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ ಪಿ.ರಾಮಕುಮಾರ್ ಆತ್ಮಹತ್ಯೆ ಕುರಿತು ಆಂಗ್ಲ ದೈನಿಕವೊಂದರಲ್ಲಿ ಸೋಮವಾರ ಪ್ರಕಟವಾದ ವರದಿಯನ್ನು ಸ್ವಯಂಪ್ರೇರಿತವಾಗಿ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್‌ಎಚ್‌ಆರ್‌ಸಿ)ವು ಘಟನೆಯ ಕುರಿತು ತನಿಖೆಗೆ ಆದೇಶಿಸಿದೆ. ಹಿರಿಯ ಪೊಲೀಸ್ ಅಧಿಕಾರಿಯ ಮೂಲಕ ತನಿಖೆ ನಡೆಸುವಂತೆ ಮತ್ತು ಎರಡು ವಾರಗಳಲ್ಲಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಎಸ್‌ಎಚ್‌ಆರ್‌ಸಿಯ ತನಿಖಾ ವಿಭಾಗದ ಹೆಚ್ಚುವರಿ ಎಡಿಜಿಪಿ ಹಾಗೂ ನಿರ್ದೇಶಕರಿಗೆ ನಿರ್ದೇಶ ನೀಡಲಾಗಿದೆ.

 ಚೆನ್ನೈನ ಪುಳಲ್ ಸೆಂಟ್ರಲ್ ಜೈಲಿನಲ್ಲಿ ರವಿವಾರ ಸಂಜೆ ಸ್ವಾತಿ ಕೊಲೆ ಆರೋಪಿ ರಾಮಕುಮಾರ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಹೊರಗೆಳೆದು ಅದನ್ನು ಬಾಯಲ್ಲಿ ಕಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಹಲವಾರು ರಾಜಕೀಯ ಪಕ್ಷಗಳು, ನಾಗರಿಕ ಹಕ್ಕು ಕಾರ್ಯಕರ್ತರು ಮತ್ತು ಕಾನೂನು ತಜ್ಞರು ಘಟನೆಯ ಕುರಿತು ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News