ರಕ್ಷಣಾ ಸಚಿವ ಪರಿಕರ್ ವಿರುದ್ಧ ಪ್ರಧಾನಿ 'ಉರಿ '
ಹೊಸದಿಲ್ಲಿ, ಸೆ.19: ಉರಿಯಲ್ಲಿ ನಡೆದ ಆತ್ಮಹತ್ಯಾ ದಾಳಿಗೆ ಸಂಬಂಧಿಸಿ ಕೇಂದ್ರ ರಕ್ಷಣಾ ಸಚಿವ ಹಾಗು ತಮ್ಮ ನೆಚ್ಚಿನ ಮನೋಹರ್ ಪರಿಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು 'ದಿ ಟೆಲಿಗ್ರಾಫ್' ವರದಿ ಮಾಡಿದೆ.
"ತವರು ರಾಜ್ಯ ಗೋವಾದ ಬದಲು ಗಡಿ ಪ್ರದೇಶದತ್ತ ಹೆಚ್ಚು ಗಮನ ನೀಡಬೇಕು. ಈ ವಿಷಯದಲ್ಲಿ ನಿಮ್ಮ ಪಾತ್ರ ಹೆಚ್ಚಬೇಕು" ಎಂದು ಕಠಿಣ ಶಬ್ದಗಳಲ್ಲೇ ಹೇಳಿದ್ದಾರೆ ಎಂದು ವರದಿಯಾಗಿದೆ. ಉರಿಯಲ್ಲಿ ದಾಳಿ ನಡೆದಾಗ ಪರಿಕರ್ ಗೋವಾದಲ್ಲಿದ್ದರು. ವಿಷಯ ತಿಳಿದು ದಿಲ್ಲಿಗೆ ಬಂದ ಅವರು ಶ್ರೀನಗರಕ್ಕೆ ಹೋಗಿ ಅಲ್ಲಿಂದ ಮರಳಿದ ಬಳಿಕ ಪ್ರಧಾನಿಯನ್ನು ಭೇಟಿಯಾಗಿ ವರದಿ ನೀಡಿದ್ದರು.
ರಕ್ಷಣಾ ಸಚಿವ ಸ್ಥಾನದಂತಹ ಮಹತ್ವದ ಹುದ್ದೆ ವಹಿಸಿದ ಮೇಲೂ ಪರಿಕರ್ ಪ್ರತಿ ವಾರಾಂತ್ಯಕ್ಕೆ ಗೋವಾಕ್ಕೆ ಹೋಗುತ್ತಿದ್ದರು. ಅಲ್ಲಿ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ನಿರ್ಣಾಯಕ ಪಾತ್ರ ಇರುತ್ತದೆ ಎಂದು ಹೇಳುತ್ತಿದ್ದರು. ಅವರಿಗೆ ಮತ್ತೆ ಗೋವಾಕ್ಕೆ ಹಿಂದಿರುಗುವ ಆಸಕ್ತಿಯೇ ಹೆಚ್ಚು ಇರುವುದು ಸ್ಪಷ್ಟವಾಗಿತ್ತು.
ಉರಿಯಲ್ಲಿ ನುಸುಳುಕೋರರು ದಾಳಿ ನಡೆಸಿದ್ದು ಇದು ರಕ್ಷಣಾ ಸಚಿವರ ವ್ಯಾಪ್ತಿಗೆ ಬರುತ್ತದೆ. ದಕ್ಷರು, ಉನ್ನತ ಶಿಕ್ಷಣ ಪಡೆದವರು ಹಾಗು ತಂತ್ರಜ್ಞಾನದಲ್ಲಿ ಪರಿಣಿತರು ಎಂದು ವಿಶೇಷ ಆಸಕ್ತಿಯಿಂದ ಪ್ರಧಾನಿ ಪರಿಕರ್ ಅವರನ್ನು ಆಯ್ಕೆ ಮಾಡಿದ್ದರು. ಹಾಗಾಗಿ ಪರಿಕರ್ ಮೇಲೆ ಈಗ ಕೆಂಗಣ್ಣು ಬಿದ್ದಿದೆ ಎಂದು ಹೇಳಲಾಗಿದೆ.
ಸಾಲದ್ದಕ್ಕೆ ಗೋವಾದ ಬಿಜೆಪಿ ಮುಖ್ಯಮಂತ್ರಿ ಲಕ್ಷ್ಮಿ ಕಾಂತ್ ಪರ್ಸೆಕರ್ ಅವರು ಕೇಂದ್ರ ಸರಕಾರ ಈ ವಿಷಯದಲ್ಲಿ ಇನ್ನಷ್ಟು ಸೂಕ್ತ ಕ್ರಮ ಕೈಗೊಂಡು ಮುಂದೆ ಇಂತಹ ದಾಳಿಗಳು ಮರುಕರಳಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿ ಪರಿಕರ್ ಹಾಗು ಬಿಜೆಪಿಗೆ ಮುಜುಗರ ತಂದಿದ್ದಾರೆ.