×
Ad

7 ವರ್ಷದ ಮುಹಮ್ಮದ್ ಹಂಝ ವಿಶ್ವದ ಅತ್ಯಂತ ಕಿರಿಯ ಕಂಪ್ಯೂಟರ್ ಪ್ರೋಗ್ರಾಮರ್

Update: 2016-09-19 23:44 IST

ಲಂಡನ್,ಸೆ.19: ಪಾಕಿಸ್ತಾನಿ ಮೂಲದ ಬ್ರಿಟಿಷ್ ಬಾಲಕ ಮುಹಮ್ಮದ್ ಹಂಝ ಶಹಜಾದ್(7) ವಿಶ್ವದ ಅತ್ಯಂತ ಕಿರಿಯ ಕಂಪ್ಯೂಟರ್ ಇಂಜಿನಿಯರ್ ಆಗಿ ಮಾನ್ಯತೆ ಪಡೆಯುವ ಮೂಲಕ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾನೆ.
ಅಂದ ಹಾಗೆ ಈ ಪೋರ ದಾಖಲೆಯನ್ನು ಸೃಷ್ಟಿಸಿರುವುದು ಇದು ಮೊದಲ ಬಾರಿಯೇನಲ್ಲ.
2015ರಲ್ಲಿ ಎಂಸ್ ವರ್ಲ್ಡ್ 2013,ಎಂಎಸ್ ಪವರ್ ಪಾಯಿಂಟ್ 2013 ಮತ್ತು ಎಂಎಸ್ ಎಕ್ಸೆಲ್ 2013 ಸೇರಿದಂತೆ ಮೂರು ಇತ್ತೀಚಿನ ಮೈಕ್ರೋಸಾಫ್ಟ್ ಆಫೀಸ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಮೂಲಕ ಅತ್ಯಂತ ಕಿರಿಯ ಎಂಎಸ್ ಆಫೀಸ್ ಸ್ಪೆಷಲಿಸ್ಟ್ ಆಗಿ ಹೊರಹೊಮ್ಮಿದ್ದ ಎಂದು ದಿ ನ್ಯೂಸ್ ವರದಿ ಮಾಡಿದೆ.
ಮುಹಮ್ಮದ್‌ನ ಇತ್ತೀಚಿನ ಅಸಾಧಾರಣ ವೃತ್ತಿಪರ ವಿದ್ಯಾರ್ಹತೆ ಆತನನ್ನು ಎಂಸ್ ಪರೀಕ್ಷೆ ‘98-361 ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಫಂಡಾಮೆಂಟಲ್ಸ್ ’ನ್ನು ತೇರ್ಗಡೆಯಾಗಲು ಕ್ವಾಲಿಫೈಡ್ ಪ್ರೋಗ್ರಾಮರ್‌ನ್ನಾಗಿ ಮಾಡಿದೆ.
ತಮ್ಮ ಮಗನಿಗೆ ಕಂಪ್ಯೂಟರ್ ಕೌಶಲ್ಯ ಸಹಜವಾಗಿ ಒಲಿದು ಬಂದಿದೆ,ಅದನ್ನು ಕಲಿಯುವಂತೆ ತಾವೆಂದೂ ಆತನ ಮೇಲೆ ಒತ್ತಡ ಹೇರಿರಲಿಲ್ಲ ಎಂದು ಮುಹಮ್ಮದ್‌ನ ಹೆತ್ತವರಾದ ಆಶಿಂ ಶಹಜಾದ್ ಮತ್ತು ಸೀಮಾಬ್ ಆಶಿಂ ತಿಳಿಸಿದರು.


ತಮ್ಮ ಮಗ ವಿಶ್ವದಾಖಲೆಯನ್ನು ಸೃಷ್ಟಿಸಿರುವುದು ತಮ್ಮನ್ನು ಅತ್ಯಂತ ಹೆಮ್ಮೆಯ ಹೆತ್ತವರನ್ನಾಗಿಸಿದೆ. ಆತನ ಸ್ವಂತ ಆಸಕ್ತಿಯನ್ನು ವೃದ್ಧಿಸಲು ತಾವು ಆತನೊಂದಿಗೆ ಕೆಲಸ ಮಾಡಿದ್ದೇವಾದರೂ ಹೊಸ ಪರಿಕಲ್ಪನೆಗಳು ಅವನದೇ ಆಗಿರುತ್ತಿದ್ದವು ಎಂದು ಅವರು ಹೇಳಿದರು. ಮುಹಮ್ಮದ್ 2009ರಲ್ಲಿ ಲಾಹೋರಿನಲ್ಲಿ ಜನಿಸಿದ್ದು, ಆಶಿಂ ಐಟಿ ಉದ್ಯೋಗಕ್ಕೆ ಆಯ್ಕೆಯಾದ ಬಳಿಕ ಈ ಕುಟುಂಬ ಲಂಡನ್‌ಗೆ ವಲಸೆ ಬಂದಿತ್ತು. ದಿ ನ್ಯೂಸ್ ಜೊತೆಗೆ ಮಾತನಾಡಿದ ಮುಹಮ್ಮದ್,ನನ್ನ ಇತ್ತೀಚಿನ ಸಾಧನೆ ನನಗೆ ಖುಷಿ ನೀಡಿದೆ. ನನ್ನ ಹೊಸ ಕೌಶಲ್ಯಗಳು ಮೋಜು ನೀಡುತ್ತಿವೆ. ಒಂದು ದಿನ ಹೊಸ ಬಿಲ್ ಗೇಟ್ಸ್ ಆಗಲು ನಾನು ಬಯಸಿದ್ದೇನೆ. ಮನೆಯಲ್ಲಿ ಸಿನಿಮಾಗಳನ್ನು ನೋಡುತ್ತೇನೆ, ಐಪಾಡ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಗೇಮ್‌ಗಳನ್ನು ಆಡುತ್ತೇನೆ. ಜೊತೆಗೆ ನನ್ನ ತಂದೆಯ ಜೊತೆಗೆ ಫುಟ್‌ಬಾಲ್ ಕೂಡ ಆಡುತ್ತೇನೆ ಎಂದು ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News