×
Ad

ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳು ಮೃತ್ಯು: ಹುತಾತ್ಮ ಯೋಧರ ಸಂಖ್ಯೆ 18ಕ್ಕೇರಿಕೆ

Update: 2016-09-19 23:51 IST

ಹೊಸದಿಲ್ಲಿ,ಸೆ.19: ಜಮ್ಮು-ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ರವಿವಾರ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 18ಕ್ಕೇರಿದೆ. ರವಿವಾರ 17 ಯೋಧರು ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಸಿಪಾಯಿ ಕೆ.ವಿಕಾಸ ಜನಾರ್ದನ ಅವರು ಸೋಮವಾರ ಇಲ್ಲಿಯ ಆರ್.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

 ರವಿವಾರ ನಸುಕಿನಲ್ಲಿ ಸಶಸ್ತ್ರ ಉಗ್ರರು ಯೋಧರು ಗಾಢನಿದ್ರೆಯಲ್ಲಿದ್ದಾಗ ಅವರ ಟೆಂಟ್‌ಗಳು ಮತ್ತು ಬ್ಯಾರಕ್‌ಗಳ ಮೇಲೆ ಗ್ರೆನೇಡ್‌ಗಳನ್ನು ಎಸೆದಿದ್ದರು ಹಾಗೂ ಕಟ್ಟಡವೊಂದಕ್ಕೆ ಬೆಂಕಿ ಹಚ್ಚಿದ್ದರು. ಬಳಿಕ ನಡೆದ ಗುಂಡಿನ ಚಕಮಕಿ ಇನ್ನಷ್ಟು ಸಾವುನೋವುಗಳಿಗೆ ಕಾರಣವಾಗಿತ್ತು. ಅಂತಿಮವಾಗಿ ಎಲ್ಲ ನಾಲ್ವರು ಭಯೋತ್ಪಾದಕರು ಬಲಿಯಾಗಿದ್ದರು. 17 ಯೋಧರು ಸಾವನ್ನಪ್ಪಿದ್ದರೆ, ಗಾಯಗೊಂಡಿದ್ದ ಇತರ 28 ಯೋಧರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿರುವ 18 ಯೋಧರನ್ನು ನಾವು ವಂದಿಸುತ್ತೇವೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಹಿರಿಯ ಸೇನಾಧಿಕಾರಿಗಳು ಮೃತ ಯೋಧರ ಕುಟುಂಬಗಳಿಗೆ ಗಾಢ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.

ಯೋಧರ ಮಾರಣಹೋಮಕ್ಕೆ ರಾಷ್ಟ್ರಾದ್ಯಂತ ತೀವ್ರ ಶೋಕ ವ್ಯಕ್ತವಾಗಿದೆ. ಹುತಾತ್ಮ ಯೋಧರು ಬಿಹಾರ, ಜಮ್ಮು-ಕಾಶ್ಮೀರ,ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳಿಗೆ ಸೇರಿದವರಾಗಿದ್ದಾರೆ.

ಗಾಯಾಳುಗಳ ಪೈಕಿ ಹೆಚ್ಚಿನವರಿಗೆ ತೀವ್ರ ಸುಟ್ಟಗಾಯಗಳಾಗಿದ್ದು ಕಣಿವೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರನ್ನು ದಿಲ್ಲಿಯ ಆರ್.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸೋಮವಾರ ಬೆಳಗ್ಗೆ ಸಹಾಯಕ ರಕ್ಷಣಾ ಸಚಿವ ಸುಭಾಷ್ ಭಾಮ್ರೆ ಅವರು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News