ದಿಲ್ಲಿ ಉಪಮುಖ್ಯಮಂತ್ರಿ ಸಿಸೋಡಿಯಾರ ಮೇಲೆ ಮಸಿ

Update: 2016-09-19 18:23 GMT

ಹೊಸದಿಲ್ಲಿ, ಸೆ.19: ದಿಲ್ಲಿಯಲ್ಲಿ ಮುಂದುವರಿ ದಿರುವ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿ ನಿಂದ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಲೆಫ್ಟಿನೆಂಟ್ ಗವರ್ನರ್‌ರ ನಿವಾಸದ ಹೊರಗೆ ಸೋಮವಾರ ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರ ಮೇಲೆ ಮಸಿ ಎರಚಿದ್ದಾನೆಂದು ಎಎನ್‌ಐ ವರದಿ ಮಾಡಿದೆ.

ಸೊಳ್ಳೆಗಳಿಂದ ಹರಡುವ ಡೆಂಗ್ ಹಾಗೂ ಚಿಕುನ್‌ಗುನ್ಯಾ ಕಾಯಿಲೆಗಳ ಹಾವಳಿಯಿಂದ ದಿಲ್ಲಿ ಕಂಗೆಟ್ಟಿರುವ ಸಮಯದಲ್ಲೇ ಈ ಘಟನೆ ನಡೆದಿದೆ. ಕಾಯಿಲೆಗಳ ಹತೋಟಿಗೆ ಕೈಗೊಂಡಿರುವ ಕ್ರಮಗಳ ಪರ್ಯಾಪ್ತತೆಯ ಬಗ್ಗೆ ಹಲವರು ಪ್ರಶ್ನಿಸುತ್ತಿದ್ದಾರೆ.

ಪಿನ್ಲೇಂಡ್‌ನಿಂದ ಗುರುವಾರ ತಡರಾತ್ರಿ ಹಿಂದಿರುಗಿದ್ದ ಸಿಸೋಡಿಯಾ ಶುಕ್ರವಾರ ಮುಂಜಾನೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್‌ರ ಭೇಟಿಗೆ ಸಮಯ ಕೇಳಿದ್ದರು. ಎರಡು ದಿನಗಳ ಹಿಂದೆಯಷ್ಟೇ ಅವರಿಗೆ ಫಿನ್ಲೇಂಡ್‌ನಿಂದ ಮರಳುವಂತೆ ಜಂಗ್ ಪತ್ರ ಬರೆದು ಆದೇಶ ನೀಡಿದ್ದರು.

ಜಂಗ್‌ರ ನಿವಾಸದ ಹೊರಗೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಸಿಸೋಡಿಯಾರ ಮೇಲೆ ವ್ಯಕ್ತಿಯೊಬ್ಬ ಶಾಯಿ ಎರಚಿದ ಚಿತ್ರಗಳನ್ನು ಟಿವಿಗಳು ಪ್ರಸಾರ ಮಾಡಿವೆ.

ಈ ಸಂಬಂಧ, ಕರವಲ್ ನಗರದ ಹೊರಗಿನ ಸ್ವರಾಜ್ ಅಭಿಯಾನ್ ಪಾರ್ಟಿಯ ಅಧ್ಯಕ್ಷನೆಂದು ಪ್ರತಿಪಾದಿಸಿರುವ ಬ್ರಿಜೇಶ್ ಶುಕ್ಲಾ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಎಎಪಿಯಿಂದ ಅಧಿಕೃತ ದೂರು ದಾಖಲಾದ ಬಳಿಕ ಎಫ್‌ಐಆರ್ ದಾಖಲಿಸಿ ಆತನನ್ನು ಬಂಧಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಚಿಕುನ್‌ಗುನ್ಯಾದಿಂದ ಕನಿಷ್ಠ 16 ಹಾಗೂ ಡೆಂಗ್‌ನಿಂದ 17 ಮಂದಿ ಸಾವನ್ನಪ್ಪಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News