×
Ad

ಸಂಘಪರಿವಾರದಿಂದಲೇ ಗೋಧ್ರಾ ರೈಲಿಗೆ ಬೆಂಕಿ: ಕಾಟ್ಜು

Update: 2016-09-19 23:53 IST

ಹೊಸದಿಲ್ಲಿ, ಸೆ.19: 2002ರಲ್ಲಿ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ್ದು ಸಂಘಪರಿವಾರ ಎಂದು ಸುಪ್ರೀಂಕೋರ್ಟಿನ ಮಾಜಿ ನ್ಯಾಯಾಧೀಶ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಮಾರ್ಕಾಂಡೇಯ ಕಾಟ್ಜು ಆರೋಪಿಸಿದ್ದಾರೆ. ಸಾಮಾಜಿಕ ತಾಣದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ತೀವ್ರ ಚರ್ಚೆಯನ್ನು ಹುಟ್ಟಿಸಿ ಹಾಕಿದೆ. ತನ್ನ ಫೇಸ್‌ಬುಕ್ ಪುಟದಲ್ಲಿ ಅವರು ಹೀಗೆಂದು ಬರೆದಿದ್ದಾರೆ. ‘‘ಗುಜರಾತ್ ರಾಜ್ಯದ ಗೋಧ್ರಾದಲ್ಲಿ 2002ರಲ್ಲಿ ನಡೆದ ಮತೀಯ ಹಿಂಸಾಚಾರದಲ್ಲಿ 2000 ಕ್ಕೂ ಅಧಿಕ ಮುಸಲ್ಮಾನರು ಸಾವಿಗೀಡಾಗಿದ್ದರು. ಅವರಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಕೂಡ ಸೇರಿದ್ದರು.

   ಕೆಲವು ಜನರು ಈ ಹಿಂಸಾಚಾರವು ಸಾಬರಮತಿ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ಹಚ್ಚಿ ಹಿಂದೂ ಸಮುದಾಯದ 54 ಜನರ ಸಾವಿಗೆ ಕಾರಣವಾದ ಘಟನೆಗೆ ಪ್ರತೀಕಾರ ಎಂದು ಹೇಳಲಾಗುತ್ತಿದೆ. ನನ್ನ ನಂಬಿಕೆಯ ಪ್ರಕಾರ ಕೆಲ ಬಲಪಂಥೀಯ ಹಿಂದೂ ಸಂಘಟನೆಗಳೇ ಮುಸ್ಲಿಮರ ವಿರುದ್ಧ ಆರೋಪ ಹೊರಿಸುವ ಉದ್ದೇಶದಿಂದ ಗೋಧ್ರಾದಲ್ಲಿ ಹಿಂದೂಗಳ ಹತ್ಯೆಗೆ ಸಂಚು ನಡೆಸಿತ್ತು’’

 ‘‘ಜರ್ಮನಿಯ ಕ್ರಿಸ್ಟಾಲ್ ನಾಚ್ಟ್‌ನಲ್ಲಿ ಯಹೂದ್ಯರ ವಿರುದ್ಧ ನವೆಂಬರ್ 10, 1938ರಲ್ಲಿ ನಡೆದ ದೌರ್ಜನ್ಯಗಳಿಗೆ ವಿರುದ್ಧವಾಗಿ ಪ್ಯಾರಿಸ್‌ನಲ್ಲಿ ಜರ್ಮನಿ ರಾಜತಾಂತ್ರಿಕರ ಹತ್ಯೆ ನಡೆದಿತ್ತು ಎಂದು ನಾಝಿಗಳು ಹೇಳಿಕೊಂಡಿದ್ದರು. ಇದು ಗೋಯೆರಿಂಗ್, ಹಿಮ್ಲರ್ ಹಾಗೂ ಹೇಡ್ರಿಚ್ ಅವರ ಷಡ್ಯಂತ್ರವಾಗಿತ್ತೆಂದು ಎಲ್ಲರಿಗೂ ತಿಳಿದಿತ್ತು’’ ಎಂಬ ವಿಚಾರವನ್ನು ವಿವರಿಸಿದ್ದಾರೆ.

   ‘‘ಹಿಂದೂ ಮೂಲಭೂತವಾದ ಸಂಘಟನೆಯೇ ಗೋಧ್ರಾದಲ್ಲಿ 54 ಹಿಂದೂಗಳ ಹತ್ಯೆಗೆ ಕಾರಣವೇ ಹೊರತು ಮುಸ್ಲಿಮರಲ್ಲವೆನ್ನುವುದಕ್ಕೆ ಏನು ಆಧಾರವಿದೆ ಎಂದು ಹಲವರು ನನ್ನಲ್ಲಿ ಕೇಳಿದ್ದಾರೆ. ಹೌದು, ನಿಜವೆಂದರೆ ನನ್ನಲ್ಲಿ ಸಾಕಷ್ಟು ನೇರ ಸಾಕ್ಷವಿಲ್ಲದಿದ್ದರೂ ಕೆಲ ಸಾಂದರ್ಭಿಕ ಸಾಕ್ಷಗಳಿವೆ. ಇಲ್ಲಿರುವ ಪ್ರಶ್ನೆಯೆಂದರೆ 54 ಹಿಂದೂ ‘ರಾಮಭಕ್ತ’ರನ್ನು ಕೊಲ್ಲುವುದರಿಂದ ಯಾರಿಗೆ ಪ್ರಯೋಜನವಾಗುವುದು? ಮುಸ್ಲಿಮರ ವಿರುದ್ಧ ದಾಳಿ ನಡೆಸಲು ಇದನ್ನೇ ನೆಪವಾಗಿಸಿದ ಕೆಲವರೇ ಇದಕ್ಕೆ ಕಾರಣ. ಗುಜರಾತ್ ರಾಜ್ಯದಲ್ಲಿ ಒಮ್ಮಿಂದೊಮ್ಮೆಗೇ ಮತೀಯ ವಿಭಜನೆ ನಡೆದಿತ್ತು. ಶೇ.91 ಹಿಂದೂಗಳು ಒಂದು ಕಡೆ ಹಾಗೂ ಶೇ.9 ಮುಸ್ಲಿಮರು ಇನ್ನೊಂದು ಕಡೆ ಇದ್ದರು. ಇಲ್ಲಿ ನನಗೆ ಗ್ಲೀವಿಟ್ಝ್ ಘಟನೆ ಜ್ಞಾಪಕಕ್ಕೆ ಬರುತ್ತದೆ’’ ಎಂದು ಹೇಳಿದ್ದಾರೆ.

   ‘‘ಹಿಟ್ಲರ್‌ಗೆ ಪೋಲಂಡ್‌ನ ಮೇಲೆ ಆಕ್ರಮಣ ಮಾಡಬೇಕಿತ್ತು. ಆದರೆ ಅದಕ್ಕೆ ಆತನಿಗೆ ನೆಪವೊಂದು ಬೇಕಿತ್ತು. ಅದಕ್ಕಾಗಿ ಆತ ಕೆಲ ಜರ್ಮನ್ನರನ್ನು ಪೋಲಿಶ್ ಸೈನಿಕರ ಸಮವಸ್ತ್ರ ಧರಿಸುವಂತೆ ಮಾಡಿ ಜರ್ಮನಿಯ ರೇಡಿಯೋ ಸ್ಟೇಶನ್ ಮೇಲೆ ದಾಳಿ ನಡೆಸುವಂತೆ ಆದೇಶಿಸಿದ. ನಂತರ ಈ ದಾಳಿಗೆ ಪೋಲಂಡ್ ಕಾರಣವೆಂದು ಆತ ಘೋಷಿಸಿದ ಹಾಗೂ ಜರ್ಮನಿಯ ಸೇನೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿ ಪರೋಕ್ಷವಾಗಿ ಪೋಲಂಡ್ ಮೇಲೆ ಆಕ್ರಮಣದ ಸೂಚನೆಯಿತ್ತಿದ್ದ’’ ಎಂದು ಕಾಟ್ಜು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News