ದಿಲ್ಲಿಯಲ್ಲಿ ಯುವತಿಯ ಭೀಭತ್ಸ ಹತ್ಯೆ
ಹೊಸದಿಲ್ಲಿ, ಸೆ.20: ಯುವಕನೊಬ್ಬ ನಡು ರಸ್ತೆಯಲ್ಲಿ 21ರ ಹರೆಯದ ಯುವತಿಯನ್ನು 30 ಬಾರಿ ಚಾಕುವಿನಿಂದ ಇರಿದು ಭೀಭತ್ಸವಾಗಿ ಕೊಲೆಗೈದ ಘಟನೆ ಉತ್ತರ ದಿಲ್ಲಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಹತ್ಯೆಗೀಡಾದ ಯುವತಿ ಕರುಣಾ ನೊವೆಲ್ ರೀಚಸ್ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಬುರಾರಿಯ ಶಾಂತ ನಗರದಲ್ಲಿ ವಾಸವಾಗಿದ್ದರು.
ಬುರಾರಿಯ ಲೇಬರ್ ಚೌಕ್‌ನಲ್ಲಿ ಈ ಅಹಿತಕರ ಘಟನೆ ನಡೆದಿದ್ದು, ರಕ್ತ ಮಡುವಿನಲ್ಲಿದ್ದ ಯುವತಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಹತ್ಯೆ ನಡೆಸಿದ ಶಂಕಿತ ಆರೋಪಿ ಸುರೇಂದ್ರ ಸಿಂಗ್ ಕಳೆದ ಒಂದು ವರ್ಷದಿಂದ ಯುವತಿಗೆ ಕಿರುಕುಳ ನೀಡುತ್ತಿದ್ದ. 4-5 ತಿಂಗಳ ಹಿಂದೆ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ಎರಡೂ ಕುಟುಂಬದವರ ನಡುವೆ ರಾಜೀ ಸಂಧಾನವಾಗಿತ್ತು. ಯುವತಿಯನ್ನು ಪೀಡಿಸುತ್ತಿದ್ದ 34ರ ಪ್ರಾಯದ ಸಿಂಗ್ ಈ ಹಿಂದೆ ಮದುವೆಯಾಗಿ ವಿಚ್ಛೇದನ ಪಡೆದಿದ್ದ ಎಂದು ಯುವತಿಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ತಮ್ಮ ಕಣ್ಣೆದುರೆ ಯುವಕನೊಬ್ಬ ಯುವತಿಯನ್ನು ರಸ್ತೆಯಲ್ಲೆ ಕೆಡವಿ ಚೂರಿಯಿಂದ ಮನಸೋ ಇಚ್ಛೆ ಇರಿದು ಕೊಲೆ ಮಾಡುತ್ತಿದ್ದರೂ ದಾರಿಹೋಕರು ಯಾರೂ ಯುವತಿಯ ನೆರವಿಗೆ ಧಾವಿಸದೇ ಅಮಾನವೀಯವಾಗಿ ವರ್ತಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.