×
Ad

ರೈಲಿನಲ್ಲೇ ಶಿಶುವಿಗೆ ಜನ್ಮವಿತ್ತ ಮಹಿಳೆ

Update: 2016-09-20 22:52 IST

ಮುಂಬೈ, ಸೆ.20: ಸಾಮಾನ್ಯವಾಗಿ ರೈಲಿನ ಸಂಚಾರ ವಿಳಂಬವಾದಾಗ ಜನ ಅಸಹನೆಯಿಂದ ಕುದಿಯುತ್ತಾರೆ. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾರೆ. ಅದೂ ಬೆಳಗ್ಗಿನ ಗಡಿಬಿಡಿಯ ಅವಧಿಯಲ್ಲಿ ರೈಲು ಸಂಚಾರ ವಿಳಂಬವಾದರೆ ಕೇಳುವುದೇ ಬೇಡ. ಆದರೆ ರೈಲು ಸಂಚಾರ ವಿಳಂಬವಾದಾಗ ಪ್ರಯಾಣಿಕರು ಚಪ್ಪಾಳೆ ಹೊಡೆಯುತ್ತಾ ಹರ್ಷೋದ್ಗಾರ ಮಾಡಿದ ಅಪರೂಪದ ಘಟನೆ ಮುಂಬೈಯಲ್ಲಿ ನಡೆದಿದೆ.

ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಆ ರೈಲು ಥಾಣೆ ರೈಲು ನಿಲ್ದಾಣದಿಂದ ಛತ್ರಪತಿ ಶಿವಾಜಿ ರೈಲುನಿಲ್ದಾಣಕ್ಕೆ ಬೆಳಗ್ಗಿನ ಅವಧಿಯಲ್ಲಿ ಸಂಚರಿಸುತ್ತಿತ್ತು. ಆ ರೈಲಿನ ಸಂಚಾರವನ್ನು ಕೆಲಹೊತ್ತು ವಿಳಂಬಗೊಳಿಸಲಾಯಿತು.ಪ್ರಯಾಣಿಕರು ಚಪ್ಪಾಳೆ ಹೊಡೆಯುತ್ತಾ ಹರ್ಷೋದ್ಗಾರ ಮಾಡುತ್ತಾ ಸಂಭ್ರಮದಲ್ಲಿದ್ದರು. ಕಾರಣ ಇಷ್ಟೇ.. ಓರ್ವ ಮಹಿಳೆ ರೈಲಿನಲ್ಲೇ ಶಿಶುವೊಂದಕ್ಕೆ ಜನ್ಮ ನೀಡಿದ್ದಳು. ಆ ರೈಲು ಮುಂಜಾನೆ 8.29ಕ್ಕೆ ಥಾಣೆ ನಿಲ್ದಾಣ ಪ್ರವೇಶಿಸಿ ಫ್ಲಾಟ್‌ಫಾರಂ 4ರಲ್ಲಿ ನಿಂತಿತ್ತು. ಅಷ್ಟರಲ್ಲಿ , ವಿಕಲಾಂಗರಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಮೀಸಲಾಗಿರುವ ರೈಲಿನ ಮಧ್ಯಭಾಗದ ಬೋಗಿಯಲ್ಲಿ ಗೊಂದಲ, ಗಡಿಬಿಡಿ ಆರಂಭವಾಯಿತು. ‘ಬೋಗಿಯ ಒಳಗೆ ಓರ್ವ ಮಹಿಳೆಗೆ ಹೆರಿಗೆ ನೋವು ಆರಂಭವಾಗಿದೆ ಎಂದು ನಮಗೆ ಕರೆ ಮಾಡಿ ತಿಳಿಸಲಾಯಿತು. ತಕ್ಷಣ ಆಂಬ್ಯುಲೆನ್ಸ್ ಮತ್ತು ಸ್ಟ್ರೆಚರ್‌ನ ವ್ಯವಸ್ಥೆ ಮಾಡಿ ರೈಲ್ವೇ ಸಿಬಂದಿಗಳೊಂದಿಗೆ ನಾವು ಅಲ್ಲಿಗೆ ಧಾವಿಸಿದೆವು ಎಂದು ರೈಲ್ವೇ ಸುರಕ್ಷಾ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ಆದರೆ ಅಷ್ಟರಲ್ಲೇ ಬೋಗಿಯ ಒಳಗಡೆ ಆ ಮಹಿಳೆಗೆ ಹೆರಿಗೆಯಾಗಿದೆ. ಬೋಗಿಯಲ್ಲಿದ್ದ ಇತರ ಮಹಿಳೆಯರು ಆಕೆಯನ್ನು ಸುತ್ತುವರಿದರು ಮತ್ತು ಆಕೆಗೆ ನೆರವಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಹಿಳೆ ಮತ್ತು ನವಜಾತ ಶಿಶುವನ್ನು ಆಂಬ್ಯುಲೆನ್ಸ್‌ಗೆ ಸ್ಥಳಾಂತರಿಸಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಆಗುವವರೆಗೆ ರೈಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ನಾನು ಫ್ಲಾಟ್‌ಫಾರಂ ತಲುಪಿದಾಗ ಅಲ್ಲಿ ಜನರು ಬೋಗಿಯನ್ನು ಸುತ್ತುವರಿದಿದ್ದರು. ಸ್ಟ್ರೆಚರ್‌ನಲ್ಲಿ ಶಿಶುವಿನೊಂದಿಗೆ ಮಹಿಳೆಯನ್ನು ಹೊರತರುತ್ತಿರುವಂತೆಯೇ ಜನರು ಚಪ್ಪಾಳೆ ತಟ್ಟುತ್ತಾ ಹರ್ಷೋದ್ಗಾರ ಮಾಡುತ್ತಿದ್ದರು ಎಂದು ಆ ರೈಲಿನಲ್ಲಿ ಪ್ರಯಾಣಿಸಲೆಂದು ಬಂದಿದ್ದ ಅನುಜಾ ಅಬ್ರಹಾಂ ಆ ಘಟನೆಯನ್ನು ವಿವರಿಸುತ್ತಾರೆ. ಸುಮಾರು 20 ನಿಮಿಷದ ವಿಳಂಬದ ಬಳಿಕ ರೈಲಿನ ಸಂಚಾರ ಆರಂಭಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News