×
Ad

ಶಿಕ್ಷೆ ವಿಧಿಸುವ ನೀತಿಗೆ ನ್ಯಾಯಮೂರ್ತಿ ಗೊಗೊಯ್ ಆಕ್ಷೇಪ

Update: 2016-09-20 22:53 IST

ಹೊಸದಿಲ್ಲಿ, ಸೆ.20: ಅಪರಾಧಿಗಳಿಗೆ ಶಿಕ್ಷೆ ನೀಡಿಕೆಗೆ ಸಂಬಂಧಿಸಿ ನ್ಯಾಯಾಧೀಶರುಗಳು ಪ್ರಸ್ತುತ ಅನುಸರಿಸುತ್ತಿರುವ ನೀತಿಯ ಬಗ್ಗೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ರಂಜನ್ ಗೊಗೊಯ್ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮರಣದಂಡನೆ ವಿಧಿಸಲ್ಪಟ್ಟಿರುವ ಬಿ.ಎ.ರಮೇಶ್ ಎಂಬಾತ ಸಲ್ಲಿಸಿದ ಪುನರ್‌ಪರಿಶೀಲನಾ ಅರ್ಜಿಯ ಆಲಿಕೆ ನಡೆಸಿದ ಸಂದರ್ಭದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘‘ಅಪರಾಧ ಒಂದೇ ರೀತಿಯದ್ದಾಗಿದ್ದರೂ, ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯಗಳು ಆರು ತಿಂಗಳಿಂದ ಹಿಡಿದು ಆರು ವರ್ಷಗಳವರೆಗೂ ಶಿಕ್ಷೆಯನ್ನು ವಿಧಿಸುತ್ತವೆ. ಇದೆಲ್ಲವೂ ವ್ಯವಹಾರಿಕ ಸೂತ್ರವಾಗಿದೆ’’ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಮೇಶ್ ಎಸಗಿದ ಅಪರಾಧವು ಅತ್ಯಂತ ಅಪರೂಪದ್ದಾಗಿದ್ದು, ಆತ ಮರಣದಂಡನೆಗೆ ಅರ್ಹ ಎಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು.
ಉಮೇಶ್‌ಗೆ ಮರಣದಂಡನೆ ವಿಧಿಸಿ ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು ಹಾಗೂ ಕ್ಷಮಾದಾನ ಕೋರಿ ಆತ ಸಲ್ಲಿಸಿದ ಅರ್ಜಿಯನ್ನು ರಾಷ್ಟ್ರಪತಿಯವರು 2013ರ ಮೇ 12ರಲ್ಲಿ ತಿರಸ್ಕರಿಸಿದ್ದರು. ತರುವಾಯ, ತನ್ನ ಪರಾಮರ್ಶನಾ ಅರ್ಜಿಯನ್ನು ಮುಕ್ತ ನ್ಯಾಯಾಲಯದಲ್ಲಿ ಆಲಿಸಬೇಕೆಂದು ಕೋರಿ ಉಮೇಶ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿತ್ತು. ಪ್ರಸ್ತುತ ಬೆಳಗಾವಿಯ ಕೇಂದ್ರೀಯ ಕಾರಾಗೃಹದಲ್ಲಿರುವ ಉಮೇಶ್, ಈಗಾಗಲೇ 17 ವರ್ಷಗಳ ಜೈಲು ಶಿಕ್ಷೆ ಪೂರ್ಣಗೊಳಿಸಿದ್ದಾನೆ.
 ಇಂದು ಉಮೇಶ್‌ನ ಪರಾಮರ್ಶನಾ ಅರ್ಜಿಯ ಆಲಿಕೆ ನಡೆಸಿದ ನ್ಯಾಯಾಧೀಶ ಗೊಗೊಯ್, ಅತ್ಯಾಚಾರ ಹಾಗೂ ಅಪರಾಧದ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆಯಾದ್ದರಿಂದ, ಇದನ್ನು ಅತ್ಯಂತ ಅಪರೂಪದ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟರು.
ಪ್ರಸ್ತುತ ನ್ಯಾಯಾಲಯಗಳ ಶಿಕ್ಷೆ ವಿಧಿಸುವ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಇತರ ದೇಶಗಳು ಅಪರಾಧಿಗೆ ಶಿಕ್ಷೆ ನೀಡುವ ವಿಷಯದಲ್ಲಿ ಅನುಸರಿಸುವ ನೀತಿಗಳನ್ನು ಪರಿಶೀಲಿಸಬೇಕೆಂದು ಕರೆ ನೀಡಿದರು.
 ಇತ್ತೀಚಿನ ದಿನಗಳಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರು ವಿವಿಧ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಗಳು ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸುತ್ತಿರುವ ಹಿನ್ನೆಲೆಯಲ್ಲಿ ಗೊಗೊಯ್ ವ್ಯಕ್ತಪಡಿಸಿರುವ ಅನಿಸಿಕೆಗಳು ಹೆಚ್ಚಿನ ಮಹತ್ವವನ್ನು ಪಡೆದಿವೆ.
 2018ರ ಅಕ್ಟೋಬರ್‌ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ಸಂಭಾವ್ಯ ನ್ಯಾಯಾಧೀಶರ ಪಟ್ಟಿಯಲ್ಲಿ ರಂಜನ್ ಗೊಗೊಯ್ ಮುಂಚೂಣಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News