10 ರೂ.ನಾಣ್ಯ ಚಾಲ್ತಿಯಲ್ಲಿದೆ :ಆರ್‌ಬಿಐ ಸ್ಪಷ್ಟನೆ
ಗುರ್ಗಾಂವ್,ಸೆ.20: 10 ರೂ.ನಾಣ್ಯವು ಚಲಾವಣೆಯಲ್ಲಿದೆ ಮತ್ತು ಅದನ್ನು ಸ್ವೀಕರಿಸಲು ನಿರಾಕರಿಸುವವರು ಕಾನೂನು ಕ್ರಮವನ್ನು ಎದುರಿಸಬೇಕಾದೀತು ಎಂದು ಮಂಗಳವಾರ ಸ್ಪಷ್ಟನೆ ನೀಡುವ ಮೂಲಕ ರಿಜರ್ವ್ ಬ್ಯಾಂಕ್ ಈ ನಾಣ್ಯವನ್ನು ನಿಷೇಧಿಸಲಾಗಿದೆ ಎಂಬ ವದಂತಿಗಳಿಗೆ ತೆರೆಯೆಳೆದಿದೆ. ರಿಜರ್ವ್ ಬ್ಯಾಂಕ್ 10 ರೂ.ನಾಣ್ಯವನ್ನು ನಿಷೇಧಿಸಿದೆ ಎಂಬ ಸಂದೇಶ ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹರಿದಾಡಿದ ನಂತರ ದಿಲ್ಲಿ ಮತ್ತು ಸುತ್ತಲಿನ ಪ್ರದೇಶಗಳ ಅಂಗಡಿಕಾರರು,ಗೂಡಂಗಡಿಗಳ ವ್ಯಾಪಾರಿಗಳು ಮತ್ತು ಆಟೋರಿಕ್ಷಾಗಳ ಚಾಲಕರು 10 ರೂ.ನಾಣ್ಯವನ್ನು ತಿರಸ್ಕರಿಸಿ ನೋಟನ್ನು ನೀಡುವಂತೆ ಕೇಳುತ್ತಿದ್ದಾರೆ ಎಂದು ವರದಿಗಳು ಕೇಳಿಬರುತ್ತಲೇ ಇದ್ದವು.
10 ರೂ.ನಾಣ್ಯವನ್ನು ನಿಷೇಧಿಸಿಲ್ಲ,ಆ ಬಗ್ಗೆ ನಾವು ಯೋಚಿಸಿಯೂ ಇಲ್ಲ ಎಂದು ಆರ್‌ಬಿಐ ವಕ್ತಾರೆ ಅಲ್ಪನಾ ಕಿಲಾವಾಲಾ ತಿಳಿಸಿದರು.
ಎರಡು ವಿನ್ಯಾಸಗಳ ನಕಲಿ ನಾಣ್ಯಗಳು ಮಾರುಕಟ್ಟೆಯಲ್ಲಿ ತುಂಬಿಹೋಗಿವೆ,ಆರ್‌ಬಿಐ 10 ರೂ.ನಾಣ್ಯಗಳನ್ನು ರದ್ದುಗೊಳಿಸಿದೆ ಮತ್ತು ಚಲಾವಣೆಯಲ್ಲಿರುವುದೆಲ್ಲ ನಕಲಿ ನಾಣ್ಯಗಳು ಎಂಬಿತ್ಯಾದಿ ವದಂತಿಗಳು ವ್ಯಾಪಕವಾಗಿ ಹರಡಿದ್ದವು.