×
Ad

ಎಫ್‌ಐಆರ್‌ನಲ್ಲಿ ಕೇಜ್ರಿವಾಲ್ ಹೆಸರು !

Update: 2016-09-21 19:21 IST

ಹೊಸದಿಲ್ಲಿ,ಸೆ.21: ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಬಿ)ವು ದಿಲ್ಲಿ ಮಹಿಳಾ ಆಯೋಗ(ಡಿಸಿಡಬ್ಲು)ದ ಕಾರ್ಯ ನಿರ್ವಹಣೆಯಲ್ಲಿ ‘ಆಡಳಿತಾತ್ಮಕ ಮತ್ತು ಹಣಕಾಸು ಅಕ್ರಮಗಳಿಗೆ’ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯ ಮೇರೆಗೆ ತನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ ಇಲ್ಲಿ ಆರೋಪಿಸಿದರು.

ತನ್ನ ಅಧಿಕೃತ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಎಫ್‌ಐ ಆರ್‌ನ ಪ್ರತಿಗಳನ್ನೂ ವಿತರಿಸಿದರು. ಎಫ್‌ಐಆರ್‌ನಲ್ಲಿ ಕೇಜ್ರಿವಾಲ್ ಮತ್ತು ಡಿಸಿಡಬ್ಲುಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರನ್ನು ‘ಪರಿಚಿತ/ಶಂಕಿತ/ಅಪರಿಚಿತ ಆರೋಪಿಗಳು ’ಎಂದು ಹೆಸರಿಸಲಾಗಿದೆ.

ಮೋದಿ ವಿರುದ್ಧ ತನ್ನ ದಾಳಿಯನ್ನು ಮುಂದುವರಿಸಿದ ಕೇಜ್ರಿವಾಲ್, ಆಪ್ ಸರಕಾರವು ಶೀಘ್ರವೇ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲಿದ್ದು, ಅಲ್ಲಿ ತಾನು ಎಫ್‌ಐಆರ್ ದಾಖಲಾತಿಯ ಹಿಂದಿನ ‘ಷಡ್ಯಂತ್ರ ’ವನ್ನು ಬಯಲುಗೊಳಿಸುವುದಾಗಿ ಹೇಳಿದರು.

ಡಿಸಿಡಬ್ಲುದಲ್ಲಿ ನೇಮಕಾತಿಗಳಲ್ಲಿ ಅಕ್ರಮಗಳ ಆರೋಪದಲ್ಲಿ ಮಲಿವಾಲ್ ವಿರುದ್ಧ ದಿಲ್ಲಿ ಸರಕಾರದ ಎಸಿಬಿಯು ಸೋಮವಾರ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

ಎಸಿಬಿ ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ತನ್ನ ಹೆಸರು ಕೂಡ ಇದೆ. ಆದರೆ ತನ್ನ ಪಾತ್ರವೇನು ಎಂಬ ಬಗ್ಗೆ ವಿವರಗಳಿಲ್ಲ. ಎಫ್‌ಐಆರ್‌ನಲ್ಲಿ ಹಾಗೆಲ್ಲ ಮಖ್ಯಮಂತ್ರಿಯ ಹೆಸರನ್ನು ಕಾಣಿಸುವಂತಿಲ್ಲ ಎಂದ ಕೇಜ್ರಿವಾಲ್, ಪ್ರಧಾನಿಯ ಅನುಮತಿಯಿಲ್ಲದೆ ಹೀಗೆ ನಡೆಯಲು ಸಾಧ್ಯವಿಲ್ಲ ಎಂದರು.

ಇದು ದಿಲ್ಲಿ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವಾಗಿದೆ ಎಂದು ಉಪ ಮುಖ್ಯಮಂತ್ರಿ ಮನೀಷ್ ಸಿಸೋದಿಯಾ ಆರೋಪಿಸಿದರು.

ಡಿಸಿಡಬ್ಲು ಮಾಜಿ ಅಧ್ಯಕ್ಷೆ ಬರ್ಖಾ ಶುಕ್ಲಾ ಸಿಂಗ್ ಅವರ ದೂರಿನ ಮೇರೆಗೆ ಈ ಎಫ್‌ಐಆರ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News