ಎಎಪಿ ಮುಖಂಡ ಸೋಮ್‌ನಾಥ್ ಭಾರ್ತಿ ಬಂಧನ
Update: 2016-09-22 14:11 IST
ಹೊಸದಿಲ್ಲಿ, ಸೆ.22: ಆಮ್ ಆದ್ಮಿ ಪಕ್ಷ(ಎಎಪಿ)ದ ವಿವಾದಿತ ಶಾಸಕ ಸೋಮ್‌ನಾಥ್ ಭಾರ್ತಿ ಏಮ್ಸ್ ಆಸ್ಪತ್ರೆಯ ಭದ್ರತಾ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಗುರುವಾರ ಬಂಧಿಸಲ್ಪಟ್ಟಿದ್ದಾರೆ.
ಸೆ.6 ರಂದು ಭಾರ್ತಿ ಹಾಗೂ ಅವರ ಬೆಂಬಲಿಗರ ಪಡೆ ನಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಿ ಏಮ್ಸ್ ಆಸ್ಪತ್ರೆ ಪೊಲೀಸರಿಗೆ ದೂರು ಸಲ್ಲಿಸಿತ್ತು.
ಭಾರ್ತಿ ಅವರು ಆಸ್ಪತ್ರೆಯ ವಸ್ತುಗಳನ್ನು ಹಾಳುಗೆಡಹಲು ಜನರಿಗೆ ಪ್ರಚೋದನೆ ನೀಡಿದ್ದರು. ಭದ್ರತಾ ಸಿಬ್ಬಂದಿಯೊಂದಿಗೂ ಅಸಭ್ಯವಾಗಿ ವರ್ತಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಹಿಂದೆ ಎಎಪಿ 49 ದಿನಗಳ ಕಾಲ ದಿಲ್ಲಿಯಲ್ಲಿ ಅಧಿಕಾರದಲ್ಲಿದ್ದಾಗ ಭಾರ್ತಿ ಎಎಪಿಯ ಕಾನೂನು ಸಚಿವರಾಗಿದ್ದರು. ಕಳೆದ ವರ್ಷ ಭಾರ್ತಿ ವಿರುದ್ಧ ಅವರ ಪತ್ನಿಯೇ ಕಿರುಕುಳ ನೀಡಿದ ಆರೋಪ ಹೊರಿಸಿದ ಕಾರಣ ಬಂಧನಕ್ಕೆ ಒಳಗಾಗಿದ್ದರು.