ಮುಂಬೈನಲ್ಲಿ ಶಂಕಿತ ಉಗ್ರರು ಪ್ರತ್ಯಕ್ಷ ? ನೌಕಾಪಡೆ ಹೈ ಅಲರ್ಟ್ ....!
ಮುಂಬೈ, ಸೆ.22: ಮುಂಬೈ ಬಂದರಿನ ಮುಂದಿರುವ ಮದ್ದುಗುಂಡುಗಳ ಸಂಗ್ರಹಗಾರ ಐಎನ್‌ಎಸ್ ಅಭಿಮನ್ಯು ಮುಂದೆ ಶಸ್ತ್ರಾಸ್ತ್ರಧಾರಿ ಉಗ್ರರನ್ನು ಇಬ್ಬರು ಶಾಲಾ ಮಕ್ಕಳು ನೋಡಿರುವುದಾಗಿ ತಿಳಿಸಿದ ಬಳಿಕ ಮುಂಬೈನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಭಾರತದ ನೌಕಾದಳವು ಮುಂಬೈನ ಭಯೋತ್ಪಾದಕ ನಿಗ್ರಹ ದಳ ಮತ್ತು ಭದ್ರತಾ ಪಡೆಗಳ ಜೊತೆಗೆ ಕಟ್ಟೆಚ್ಚರ ವಹಿಸಿದ್ದು, ಉಗ್ರರ ಸಂಭಾವ್ಯ ದಾಳಿಯನ್ನು ತಪ್ಪಿಸಲು ಸಜ್ಜಾಗಿದೆ. ನೌಕಾಪಡೆಯ ಕಮಾಂಡೊಗಳು ( ಮಾರ್ಕೊಸ್ ) ಉರಣ್ ನೌಕಾನೆಲೆಯನ್ನು ಸುತ್ತುವರಿದಿದ್ದಾರೆ. ಮುಂಬೈ ನಗರದಲ್ಲಿ ಪೊಲೀಸರು ನಾಕಾಬಂಧಿ ಹಾಕಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.
ಟಿವಿ ವಾಹಿನಿಗಳ ವರದಿ ಪ್ರಕಾರ ಗುರುವಾರ ಬೆಳಗ್ಗೆ 6 ಗಂಟೆ ಹೊತ್ತಿಗೆ ಸೇನಾ ಸಮವಸ್ತ್ರದಲ್ಲಿದ್ದ ನಾಲ್ಕೈದು ಶಂಕಿತ ಉಗ್ರರು ಮುಂಬೈ ಸಮೀಪದ ಉರಣ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗುಪ್ತಚರ ದಳ ಮೂಲಗಳ ಪ್ರಕಾರ ಅಂತಹ ಶಂಕಾಸ್ಪದ ಉಗ್ರರ ಮಾಹಿತಿ ಇಲ್ಲ.ಹುಡುಗಿಯೊಬ್ಬಳು ಶಂಕಿತ ಉಗ್ರರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಳು ಎಂದು ತಿಳಿದು ಬಂದಿದೆ.