ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿ ತಮಿಳು ಚಿತ್ರ ‘ವಿಸಾರಣೈ’

Update: 2016-09-22 15:12 GMT

ಹೊಸದಿಲ್ಲಿ,ಸೆ.22: 2017ರ ಆಸ್ಕರ್ ಪ್ರಶಸ್ತಿಗಳಿಗಾಗಿ ವಿದೇಶಿ ಭಾಷಾ ಚಿತ್ರಗಳ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾಗಿ ಧನುಷ್ ನಿರ್ಮಾಣದ,ವೆಟ್ರಿಮಾರನ್ ನಿರ್ದೇಶಿಸಿರುವ ‘ವಿಸಾರಣೈ ’ಆಯ್ಕೆಯಾಗಿದೆ. ಈ ಚಿತ್ರವು ಈಗಾಗಲೇ ಅತ್ಯುತ್ತಮ ತಮಿಳು ಚಿತ್ರ ಪ್ರಶಸ್ತಿ ಸೇರಿದಂತೆ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿ ಗೇರಿಸಿಕೊಂಡಿದೆ.
ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿರುವ ‘ವಿಸಾರಣೈ’ ಪೊಲೀಸ್ ಕ್ರೌರ್ಯವನ್ನು ಆಧರಿಸಿದ್ದು, ಎಂ.ಚಂದ್ರಕುಮಾರ್ ಅವರ ‘ಲಾಕಪ್’ ಕಾದಂಬರಿಯನ್ನು ತೆರೆಗಿಳಿಸಲಾಗಿದೆ. ಈ ಚಿತ್ರದ ಆಯ್ಕೆಯೊಡನೆ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾರತದ ಅಧಿಕೃತ ಪ್ರವೇಶವಾಗಿ ಹಿಂದಿ ಭಾಷೆಗಳಿಗೆ ಮಣೆ ಹಾಕುವ ಪದ್ಧತಿ ಸತತ ಎರಡನೇ ವರ್ಷವೂ ನಿಂತಿದೆ. ಈ ಹಿಂದೆ ಜೀನ್ಸ್, ಇಂಡಿಯನ್, ಕುರಿದಿಪುನಲ್, ದೇವರ ಮಗನ್, ಅಂಜಲಿ, ನಾಯಗನ್‌ನಂತಹ ತಮಿಳು ಚಿತ್ರಗಳು ಆಸ್ಕರ್ ಪ್ರಶಸ್ತಿಗಳಿಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿದ್ದವು.
 ತಾವೆಂದೂ ಎಸಗದಿದ್ದ ಅಪರಾಧದ ಆರೋಪಕ್ಕೆ ಗುರಿಯಾದ ನಾಲ್ವರು ವಲಸಿಗ ಕಾರ್ಮಿಕರ ಬದುಕನ್ನು ‘ವಿಸಾರಣೈ ’ ಆಧರಿಸಿದೆ. ತಮಿಳುನಾಡಿನ ಈ ನಾಲ್ವರು ವಲಸಿಗ ಕಾರ್ಮಿಕರನ್ನು ಗುಂಟೂರಿನಲ್ಲಿ ಪೊಲೀಸರು ಬಂಧಿಸಿರುತ್ತಾರೆ. ಇದು ಅವರನ್ನು ಅಪರಾಧಗಳ ಬಲೆಯಲ್ಲಿ ಸಿಲುಕಿಸುತ್ತದೆ ಮತ್ತು ಅಂತಿಮವಾಗಿ ಎನ್‌ಕೌಂಟರ್‌ನಲ್ಲಿ ಅವರೆಲ್ಲ ಕೊಲ್ಲಲ್ಪಡುತ್ತಾರೆ. ಚಿತ್ರವು ಕೆಲ ನಿಜಜೀವನದ ಘಟನೆಗಳೊಂದಿಗೆ ಹೋಲಿಕೆಯನ್ನು ಹೊಂದಿದೆ.
ಈ ಹಿಂದೆ 72ನೇ ವೆನಿಸ್ ಚಲನ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಈ ಚಿತ್ರವು ಆಯ್ಕೆಯಾಗಿತ್ತು.
2016ರಲ್ಲಿ ಮರಾಠಿ ಚಿತ್ರ ‘ಕೋರ್ಟ್’ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶ ವಾಗಿತ್ತು. 89ನೇ ಆಸ್ಕರ್ ಪ್ರಶಸ್ತಿ ಪ್ರದಾನ ಲಾಸ್ ಏಂಜಲಿಸ್‌ನಲ್ಲಿ 2017, ಫೆಬ್ರು ವರಿಯಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News