ಆರೋಗ್ಯ ಪರಿಸ್ಥಿತಿ : 188 ದೇಶಗಳ ಪೈಕಿ ಭಾರತ ಎಲ್ಲಿದೆ ನೋಡಿ
ಹೊಸದಿಲ್ಲಿ, ಸೆ.23: ಅತ್ಯಧಿಕ ಮರಣ ಪ್ರಮಾಣ, ಮಲೇರಿಯಾ, ನೈರ್ಮಲ್ಯ ಕೊರತೆ ಹಾಗೂ ವಾಯು ಮಾಲಿನ್ಯದ ಕಾರಣಗಳಿಂದಾಗಿ ಭಾರತದ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಜಾಗತಿಕ ಮಟ್ಟದ ಅಧ್ಯಯನವೊಂದು ಹೇಳಿದೆ. ಆರೋಗ್ಯ ಸ್ಥಿತಿಯಲ್ಲಿ ಭಾರತ ವಿಶ್ವದ 188 ದೇಶಗಳ ಪೈಕಿ 143ನೇ ಸ್ಥಾನದಲ್ಲಿದೆ.
"ಕ್ಷಿಪ್ರ ಆರ್ಥಿಕ ಪ್ರಗತಿಯ ಹೊರತಾಗಿಯೂ, ಭಾರತದ ರ್ಯಾಂಕಿಂಗ್ ಕೊಮೊರೋಸ್ ಹಾಗೂ ಘಾನಾಕ್ಕಿಂತಲೂ ಕೆಳಗಿದೆ" ಎಂದು ಮೊದಲ ವಾರ್ಷಿಕ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಮೌಲ್ಯಮಾಪನ ವರದಿ ಬಹಿರಂಗಪಡಿಸಿದೆ. ಹಲವು ಆರೋಗ್ಯ ಸೂಚಕಗಳನ್ನು ಮಾನದಂಡವಾಗಿ ಇಟ್ಟುಕೊಂಡು ನಡೆಸಿದ ಅಧ್ಯಯನ ವರದಿಯನ್ನು ಲ್ಯಾನ್ಸೆಟ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ವೇಳೆ ನಡೆದ ವಿಶೇಷ ಸಮಾರಂಭದಲ್ಲಿ ಈ ವರದಿ ಬಿಡುಗಡೆ ಮಾಡಲಾಗಿದೆ.
ಭಾರತವು ನೆರೆ ದೇಶಗಳಾದ ಪಾಕಿಸ್ತಾನ ಹಾಗೂ ಬಾಂಗ್ಲಾಕ್ಕಿಂತ ತುಸು ಮುಂದಿದ್ದು, ಈ ಎರಡು ದೇಶಗಳು ಕ್ರಮವಾಗಿ 149 ಹಾಗೂ 151ನೇ ಸ್ಥಾನದಲ್ಲಿವೆ. ಅತ್ಯಧಿಕ ಮರಣ ಪ್ರಮಾಣ, ಮಲೇರಿಯಾ, ನೈರ್ಮಲ್ಯ ಕೊರತೆ ಹಾಗೂ ವಾಯು ಮಾಲಿನ್ಯದ ಕಾರಣಗಳಿಂದಾಗಿ ಭಾರತವು ಭೂತಾನ್, ಬೋಟ್ಸುವಾನಾ, ಸಿರಿಯಾ ಹಾಗೂ ಶ್ರೀಲಂಕಾಗಿಂತಲೂ ಕೆಳಮಟ್ಟಕ್ಕೆ ಇಳಿದಿದೆ. ಪ್ರಮುಖ ಆರೋಗ್ಯ ಸೂಚಕಗಳಲ್ಲೊಂದಾದ ಮಲೇರಿಯಾದಲ್ಲಿ ಭಾರತ 10 ಅಂಕ ಪಡೆದು ಅಪಾಯಕಾರಿ ವಲಯದಲ್ಲಿದೆ. ಅಂತೆಯೇ ನೈರ್ಮಲ್ಯದಲ್ಲಿ ಎಂಟು ಅಂಕ ಪಡೆದಿದ್ದು, ನೀರಿನ ಗುಣಮಟ್ಟ ಸೂಕಕವಾದ ಪಿಎಂ 2.5ರಲ್ಲಿ (ದಶಲಕ್ಷ ಕಣಗಳಲ್ಲಿ ಕಲುಶಿತ ಅಂಶ) 18 ಅಂಕ ಪಡೆದಿದ್ದು, ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾವಿನಲ್ಲಿ 39, ಹೆರಿಗೆ ಸಾವಿನ ಪ್ರಮಾಣದಲ್ಲಿ 28 ಅಂಕಗಳನ್ನಷ್ಟೇ ಪಡೆಯಲು ಸಾಧ್ಯವಾಗಿದೆ. ಆದರೆ ನಿರ್ಲಕ್ಷಿತ ಉಷ್ಣವಲಯದ ರೋಗಗಳಲ್ಲಿ ಭಾರತ 80 ಅಂಕ ಪಡೆದಿದೆ.
ಐಸ್‌ಲೆಂಡ್ ಅತ್ಯಧಿಕ ಎಸ್‌ಡಿಜಿ ಸೂಚ್ಯಂಕ ಪಡೆದಿದ್ದು, ಸಿಂಗಾಪುರ ಹಾಗೂ ಸ್ವೀಡನ್ ನಂತರದ ಸ್ಥಾನಗಳಲ್ಲಿವೆ. ಬ್ರಿಟನ್ ಐದನೇ ಸ್ಥಾನದಲ್ಲಿದ್ದು, ಫಿನ್‌ಲ್ಯಾಂಡ್ ಮುಂದಿನ ಸ್ಥಾನದಲ್ಲಿದೆ. ಕೇಂದ್ರ ಆಫ್ರಿಕನ್ ರಿಪಬ್ಲಿಕ್, ಸೋಮಾಲಿಯಾ ಹಾಗೂ ದಕ್ಷಿಣ ಸೂಡಾನ್ ಕೊನೆಯ ಸ್ಥಾನಗಳಲ್ಲಿವೆ.