ಕಾಮುಕ ಸಾಲಗಾರನ ಕಿರುಕುಳಕ್ಕೆ ಘೋರ ಶಿಕ್ಷೆ ನೀಡಿದ ಸಹೋದರಿಯರು
ಮೀರಠ್: ತಂದೆಗೆ ಒಂದು ಲಕ್ಷ ರೂಪಾಯಿ ಸಾಲ ನೀಡಿದ ಲೇವಾದೇವಿದಾರನೊಬ್ಬನು ನೀಡುತ್ತಿದ್ದ ನಿರಂತರ ಕಿರುಕುಳ ಹಾಗೂ ಆತನ ಲೈಂಗಿಕ ಅಪೇಕ್ಷೆಯಿಂದ ಬೇಸತ್ತ ಮೂವರು ಸಹೋದರಿಯರು ಆತನನ್ನು 20 ಬಾರಿ ಇರಿದು ಸಾಯಿಸಿದ ಘಟನೆ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳೆಯರನ್ನು, ಮೂರು ಚೂರಿ ಸಹಿತ ಬಂಧಿಸಿ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಹಿಳೆಯರ ತಂದೆ ಹಾಗೂ ಕೃತ್ಯಕ್ಕೆ ಸಹಕರಿಸಿದ ಎನ್ನಲಾದ ಈ ಮಹಿಳೆಯರ ಪೈಕಿ ಒಬ್ಬಳ ಸ್ನೇಹಿತನನ್ನೂ ಬಂಧಿಸಲಾಗಿದೆ.
"ಕೊಲೆಯಾದ ಶಮೀಮ್ ಅಹ್ಮದ್ ಎಂಬಾತ ತಂದೆಗೆ ನೀಡಿದ ಸಾಲವನ್ನು ನೆಪವಾಗಿ ಮಾಡಿಕೊಂಡು ಅವರ ಮನೆಗೆ ಪದೇ ಪದೇ ಬಂದು ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ. ಈ ಪೈಕಿ ಹಿರಿಯವಳಾದ 27 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳವನ್ನೂ ನೀಡಿದ್ದಾನೆ. ತಂಗಿಯಂದಿರನ್ನು ತನ್ನ ಬಳಿಗೆ ಕಳುಹಿಸುವಂತೆ ಆಕೆಗೆ ಒತ್ತಡ ತರುತ್ತಿದ್ದ ಎನ್ನಲಾಗಿದೆ" ಎಂದು ಎಸ್ಪಿ ವಿಜಯ್ ಭೂಷಣ್ ವಿವರಿಸಿದ್ದಾರೆ.
"ಮೂವರು ಮಹಿಳೆಯರ ಪೈಕಿ ಒಬ್ಬಳು ಆತನನ್ನು ಮನೆಗೆ ಬರಲು ಹೇಳಿ, ಆತ ಆಗಮಿಸಿದ ತಕ್ಷಣ ಮೂವರೂ ದಾಳಿ ನಡೆಸಿದರು" ಎಂದು ಹೇಳಿದ್ದಾರೆ.