×
Ad

ಕೊಲಿಜಿಯಂ ವ್ಯವಸ್ಥೆ ನ್ಯಾಯಾಂಗಕ್ಕೆ ಅವಸರದ ನೇಮಕಾತಿ ಸರಿಯೇ?

Update: 2016-09-23 23:19 IST

ಕೊಲಿಜಿಯಂನಂತಹ ಅಪಾರದರ್ಶಕ ವ್ಯವಸ್ಥೆಯಡಿ ನ್ಯಾಯಾಧೀಶರನ್ನು ನೇಮಕಗೊಳಿಸುವುದು, ಅಪ್ಪಟ ಅರ್ಹತೆಯ ಆಧಾರದಲ್ಲಿ ನ್ಯಾಯಾಧೀಶರ ನೇಮಕಾತಿಗೆ ತುಸು ಸಮಯ ಕಾಯುವುದಕ್ಕಿಂತ ಹೆಚ್ಚು ಹಾನಿಯನ್ನುಂಟು ಮಾಡಬಲ್ಲದು.

ನ್ಯಾ ಯಾಧೀಶರ ನೇಮಕಾತಿ ಮಾಡುವ ಕೊಲಿಜಿಯಂ ಕಾರ್ಯನಿರ್ವಹಣೆ ಬಗ್ಗೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಜೆ. ಚೆಲಮೇಶ್ವರ್ ಎತ್ತಿರುವ ಆಕ್ಷೇಪವು, ನ್ಯಾಯಾಂಗದ ಸ್ವಾತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿರುದ್ಧ ತೀರ್ಪನ್ನು ನೀಡಿದ ಅವರು ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದ್ದರು. ಸಾಂವಿಧಾನಿಕ ಪೀಠದ ಹೆಚ್ಚಿನ ನ್ಯಾಯಾಧೀಶರು ನ್ಯಾಯಾಂಗ ನೇಮಕಾತಿ ಕಾಯ್ದೆ ಅಸಾಂವಿಧಾನಿಕವೆಂದು ಘೋಷಿಸುವ ಮೂಲಕ ಈಗ ಅಸ್ತಿತ್ವದಲ್ಲಿರುವ ಕೊಲಿಜಿಯಂ ವ್ಯವಸ್ಥೆಯನ್ನು ಮುಂದುವರಿಸಲು ಸಮ್ಮತಿಸಿದ್ದರು.

ಆದರೆ ನ್ಯಾಯಮೂರ್ತಿ ಚೆಲಮೇಶ್ವರ್ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಹೆಚ್ಚಿನ ಮಹತ್ವವಿದೆ. ಯಾಕೆಂದರೆ, ಅವರು ಹಾಲಿ ನ್ಯಾಯಾಧೀಶರು ಮಾತ್ರವಲ್ಲ, ಕೊಲಿಜಿಯಂನ ಸದಸ್ಯರೂ ಹೌದು. ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಸುಪ್ರೀಂಕೋರ್ಟ್‌ನ ಅನೇಕ ನ್ಯಾಯಾಧೀಶರು ಕೊಲೆಜಿಯಂ ವ್ಯವಸ್ಥೆಯ ವಿರುದ್ಧ ಮಾತನಾಡಿದ್ದರು. ಅದರ ಕಾರ್ಯನಿರ್ವಹಣೆ ಪಾರದರ್ಶಕವಾಗಿಲ್ಲವೆಂದವರು ಖಂಡಿಸಿದ್ದರು. ಆದಾಗ್ಯೂ, ಅವರೆಲ್ಲಾ ತಮ್ಮ ನಿವೃತ್ತಿಯ ಆನಂತರವಷ್ಟೇ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.

  ಅವರಲ್ಲಿ ಪ್ರಮುಖರೆಂದರೆ ನ್ಯಾಯಮೂರ್ತಿ ರುಮಾ ಪಾಲ್, 2011ರ ನವೆಂಬರ್‌ನಲ್ಲಿ ನೀಡಿದ ಸಾರ್ವಜನಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಕೊಲಿಜಿಯಂ ವ್ಯವಸ್ಥೆಯನ್ನು ಟೀಕಿಸಿದ್ದರು. ‘ದ್ವಿತೀಯ ನ್ಯಾಯಾಧೀಶರ ಪ್ರಕರಣ’(1993), ಪುಸ್ತಕ ಕೃತಿಯ ಲೇಖಕರಾದ ನ್ಯಾಯಮೂರ್ತಿ ಜೆ.ಎಸ್. ವರ್ಮಾ, ಕೊಲಿಜಿಯಂ ವ್ಯವಸ್ಥೆಯ ಕಾರ್ಯನಿರ್ವಹಣೆ ವಿರುದ್ಧ ತನ್ನ ಅಸಂತೃಪ್ತಿಯನ್ನು ಬಲವಾಗಿ ವ್ಯಕ್ತಪಡಿಸಿದ್ದಾರೆ. ಕೊಲಿಜಿಯಂ ವ್ಯವಸ್ಥೆಯಡಿ ಅತ್ಯಂತ ಅರ್ಹ ವ್ಯಕ್ತಿಗಳು ನ್ಯಾಯಾಧೀಶ ಹುದ್ದೆೆಗೆ ನೇಮಕವಾಗುತ್ತಿಲ್ಲವೆಂಬುದನ್ನು ಅವರು ಮನಗಂಡಿದ್ದಾರೆ.

  ನ್ಯಾಯಾಂಗ ಸಂಸ್ಥೆಯ ಕುರಿತ ಕಾಳಜಿ ಹಾಗೂ ಶ್ರದ್ಧೆಯಿಂದಾಗಿ ನ್ಯಾಯಮೂರ್ತಿ ಚೆಲಮೇಶ್ವರ್ ಈ ನಿಲುವನ್ನು ತಳೆದಿದ್ದಾರೆಂಬುದು ಎಲ್ಲರಿಗೂ ಅರ್ಥವಾಗುತ್ತದೆ. ವಿಶೇಷವಾಗಿ ಇಂತಹ ಸಂವೇದನಕಾರಿ ವಿಷಯಗಳಲ್ಲಿ ಓರ್ವ ವ್ಯಕ್ತಿ ತನಗೆ ಸರಿ ಎಂದು ತೋಚಿದ್ದನ್ನು ಬಹಿರಂಗವಾಗಿ ಹೇಳಿಕೊಳ್ಳುವುದು ಸುಲಭವೇನಲ್ಲ. ಆದರೆ ನ್ಯಾಯಮೂರ್ತಿ ಚೆಲಮೇಶ್ವರ್ ನುಡಿದಂತೆ ನಡೆದಿದ್ದಾರೆ ಹಾಗೂ ಅತ್ಯುನ್ನತ ಮಾನವ ವೌಲ್ಯವಾದ ಸತ್ಯಸಂಧತೆಯನ್ನು ಎತ್ತಿಹಿಡಿದಿದ್ದಾರೆ. ನ್ಯಾಯಾಂಗ ಸಂಸ್ಥೆಯೊಳಗೆ ತನಗೆ ಎದುರಾಗುವ ಟೀಕೆಗಳ ಬಗ್ಗೆ ಚಿಂತಿಸದ ಅವರು ತನ್ನ ಬದ್ಧತೆಯಿಂದಾಗಿ ಸದಾ ನೆನಪಿನಲ್ಲುಳಿಯಲಿರುವರು. ಚೆಲಮೇಶ್ವರ್ ಮೊದಲು ಕೊಲಿಜಿಯಂ ತೊರೆಯಬೇಕು ಹಾಗೂ ಆನಂತರ ಅದನ್ನು ಟೀಕಿಸಬೇಕೆಂಬ ಖ್ಯಾತ ನ್ಯಾಯವಾದಿ ಫಾಲಿ ನಾರಿಮನ್‌ರ ಅಭಿಪ್ರಾಯದಲ್ಲಿ ಹುರುಳಿಲ್ಲ.

ತನ್ನ ವೌನವು ತಾನು ಏನನ್ನು ನಂಬಿದ್ದೇನೋ ಅದಕ್ಕೆ ವಿರುದ್ಧವಾದ ಸಂದೇಶವನ್ನು ನೀಡುತ್ತದೆಯೆಂದಾದಲ್ಲಿ ಆಗ ನ್ಯಾಯಾಧೀಶನು ಮಾತನಾಡಲೇ ಬೇಕಾಗುತ್ತದೆ. ಕೊಲಿಜಿಯಂ ವ್ಯವಸ್ಥೆಯ ಅಪಾರದರ್ಶಕ ಕಾರ್ಯನಿರ್ವಹಣೆಯ ಬಗ್ಗೆ ಜನರಿಗೆ ಅರಿವಿಲ್ಲವೆಂದಲ್ಲ. ಆದರೆ ಅವರು ನ್ಯಾಯಾಂಗ ನಿಂದನೆಯಾಗುವುದೆಂಬ ಭೀತಿಯಿಂದ ಸುಮ್ಮನಿದ್ದಾರೆ. ನ್ಯಾಯವಾದಿಗಳು ಕೊಲಿಜಿಯಂ ವಿರುದ್ಧ ತಮ್ಮ ಅಸಮಾಧಾನದ ಬಗ್ಗೆ ಧ್ವನಿಯೆತ್ತುವ ಧೈರ್ಯ ಮಾಡುತ್ತಿಲ್ಲ. ಕೊಲಿಜಿಯಂನ ಕಾರ್ಯನಿರ್ವಹಣೆಯು ಈಗ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ಇಷ್ಟು ವರ್ಷಗಳಲ್ಲಿ ಕೊಲಿಜಿಯಂ ವ್ಯವಸ್ಥೆಯು ಇದೇ ರೀತಿಯಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದಾದರೆ, ಅದು ಸ್ವಜನಪಕ್ಷಪಾತ ಹಾಗೂ ಅನ್ಯೋನ್ಯತೆಯಿಂದ ಮುಕ್ತವಾಗಿತ್ತು ಹಾಗೂ ಅಪ್ಪಟ ಅರ್ಹತೆಯನ್ನು ಆಧರಿಸಿತ್ತೆಂದು ಹೇಳಲು ಸಾಧ್ಯವಿಲ್ಲ.

 ಒಂದು ವೇಳೆ ಕೊಲಿಜಿಯಂ ವ್ಯವಸ್ಥೆಯು ಅರ್ಹತೆಯ ಕುರಿತಾಗಿ ವಿಧಿವಿಧಾನಗಳನ್ನು ಅನುಸರಿಸದೆ ಹಾಗೂ ಚರ್ಚೆಗಳನ್ನು ನಡೆಸದೆ ಕೇವಲ ಹೆಸರುಗಳಿಗೆ ಮಾತ್ರವೇ ಅನುಮೋದನೆ ನೀಡುವುದಾದರೆ, ನ್ಯಾಯಮೂರ್ತಿ ಚೆಲಮೇಶ್ವರ್‌ಗಿಂತ ಮೊದಲು ಯಾವುದೇ ನ್ಯಾಯಾಧೀಶ ಅದನ್ನು ಪ್ರಶ್ನಿಸದಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ನ್ಯಾಯಾಧೀಶರ ನೇಮಕವನ್ನು ನ್ಯಾಯಾಧೀಶರೇ ಮಾಡುವ ಪ್ರಕ್ರಿಯೆಗೆ ಅತ್ಯುನ್ನತ ಮಟ್ಟದ ಪರಿಶೀಲನೆ ಹಾಗೂ ಅತ್ಯುತ್ತಮ ಅಭ್ಯರ್ಥಿಗಾಗಿ ನಿರಂತರವಾದ ಅನ್ವೇಷಣೆಯ ಅಗತ್ಯವಿದೆ. ಇದೊಂದು ಅತ್ಯುನ್ನತ ಕರ್ತವ್ಯವೂ ಆಗಿದೆ. ಯಾಕೆಂದರೆ ಈ ಕರ್ತವ್ಯವನ್ನು ವಿಶ್ವಾಸಾರ್ಹತೆಯಿಂದ ನಿರ್ವಹಿಸುವುದರಿಂದ ಸಾಂಸ್ಥಿಕ ಪ್ರಾಮಾಣಿಕತೆ ಹಾಗೂ ನ್ಯಾಯಕ್ಕಾಗಿ ಜನತೆಯ ಹಂಬಲವು ಈಡೇರುವುದು. ಆದರೆ ಇಲ್ಲೊಂದು ಮುಖ್ಯವಾದ ಪ್ರಶ್ನೆಯೇನೆಂದರೆ, ಜನತೆಗೆ ನ್ಯಾಯಾಧೀಶರ ನೇಮಕಾತಿಯ ವಿಷಯದಲ್ಲಿ ಕಾಳಜಿಯಿಲ್ಲವೇ ಎಂಬುದಾಗಿದೆ.

ಇಷ್ಟೊಂದು ವರ್ಷಗಳಲ್ಲಿ ಕೊಲಿಜಿಯಂ ವ್ಯವಸ್ಥೆಯು ನ್ಯಾಯಾಧೀಶರನ್ನು ಜ್ಞಾನ, ಸತ್ಯಸಂಧತೆ, ಋಜುತ್ವ ಹಾಗೂ ಪ್ರಾಮಾಣಿಕತೆಯ ಆಧಾರದಲ್ಲಿ ನೇಮಕಗೊಳಿಸುತ್ತಿತ್ತೇ ಎಂಬುದನ್ನು ಅದು ತನ್ನಲ್ಲಿ ತಾನೇ ಕೇಳಿಕೊಳ್ಳಬೇಕಾಗಿದೆ. ಒಂದು ವೇಳೆ ಹಾಗೆ ಅಲ್ಲದಿದ್ದಲ್ಲಿ ಇಂದು ದೇಶದ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಪರಿಸ್ಥಿತಿಗೆ ಅದು ಹೊಣೆಹೊತ್ತು ಕೊಳ್ಳಬೇಕಾಗುತ್ತದೆ.

ಜನರು ಕೊಲಿಜಿಯಂ ವ್ಯವಸ್ಥೆಯ ಅಧಃಪತನವನ್ನು ಕಾಣುತ್ತಿದ್ದಾರೆ. ದಕ್ಷತೆ ಹಾಗೂ ಗುಣಮಟ್ಟ ಹೊಂದಿರುವ ನ್ಯಾಯಾಧೀಶರು ನಾಯಾಂಗ ವ್ಯವಸ್ಥೆಯ ಮೂಲಭೂತ ಅಗತ್ಯವಾಗಿದ್ದಾರೆ. ತೀರ್ಪುಗಳ ಸ್ಪಷ್ಟತೆ, ಸೂಕ್ತ ಹಾಗೂ ನಿಷ್ಪಕ್ಷಪಾತ ಆಲಿಕೆ ಹಾಗೂ ಯಾವುದೇ ಬಾಹ್ಯ ಪ್ರಭಾವಕ್ಕೊಳಗಾಗದೆ ನ್ಯಾಯದಾನ ಮಾಡಲಾಗುವುದೆಂಬ ಸಂದೇಶವನ್ನು ಸಮಾಜಕ್ಕೆ ರವಾನಿಸುವುದು ಆರೋಗ್ಯಕರ ನ್ಯಾಯಾಂಗದ ಗುರುತುಚಿಹ್ನೆಯಾಗಿದೆ.

ನ್ಯಾಯಾಧೀಶರ ಅದಕ್ಷತೆ, ನಿರ್ಧಾರರಾಹಿತ್ಯತೆ, ಆಲಿಕೆಗಳ ಪುನರಾವರ್ತಿತ ಮುಂದೂಡಿಕೆಗಳು, ಹಾಗೂ ಅಸ್ತಿತ್ವದಲ್ಲಿರುವ ಕಾನೂನಿನ ಕುರಿತ ಅಜ್ಞಾನ ಇವೆಲ್ಲವುಗಳಿಂದಾಗಿ ನ್ಯಾಯದಾನದಲ್ಲಿ ವಿಳಂಬ ಹಾಗೂ ನ್ಯಾಯ ದೊರೆಯದೆ ಇರುವುದಕ್ಕೆ ಕಾರಣವಾಗುತ್ತಿವೆಯೇ?. ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದ ಪ್ರಕರಣಗಳು ಯಾಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿವೆ. ಇವೆಲ್ಲವೂ ಗಂಭೀರವಾದ ಪ್ರಶ್ನೆಗಳಾಗಿವೆ.

ವೈಜ್ಞಾನಿಕ ಅಂದಾಜಿಸುವಿಕೆ

   ನ್ಯಾಯಾಧೀಶರ ನೇಮಕಾತಿಗಳಲ್ಲಿ ನ್ಯಾಯಾಂಗದ ಸ್ವಾತಂತ್ರ ಹಾಗೂ ಸಾರ್ವಭೌಮತೆಯನ್ನು ಕಾಪಾಡುವ ಚಿಂತನೆಯೇ, ಕೊಲಿಜಿಯಂ ವ್ಯವಸ್ಥೆಯ ಪರಿಕಲ್ಪನೆ ರೂಪುಗೊಳ್ಳಲು ಕಾರಣವಾಯಿತು. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರಾಗಿ ಅರ್ಹ ಹಾಗೂ ಸಮರ್ಥ ವ್ಯಕ್ತಿಗಳು ನೇಮಕಗೊಳ್ಳುವಂತೆ ಹಾಗೂ ರಾಜಕೀಯ ಮತ್ತಿತರ ಬಾಹ್ಯ ಅಂಶಗಳನ್ನು ಪರಿಗಣಿಸಿ ಯಾವುದೇ ನೇಮಕಾತಿಗಳನ್ನು ಮಾಡದಂತೆ ನೋಡಿಕೊಳ್ಳುವುದೇ ಕೊಲಿಜಿಯಂ ವ್ಯವಸ್ಥೆಯ ಮುಖ್ಯ ಆಶಯವಾಗಿದೆ.

ವೈಯಕ್ತಿಕ ಮಹತ್ವಾಕಾಂಕ್ಷೆ, ರಾಜಕೀಯ ನಿಷ್ಠೆ, ಧಾರ್ಮಿಕ ಅಥವಾ ವರ್ಗೀಯ ಪರಿಗಣನೆಗಳು, ಅದಕ್ಷತೆ ಹಾಗೂ ಪ್ರಾಮಾಣಿಕತೆಯ ಕೊರತೆ ಇವು ನ್ಯಾಯಾಧೀಶನನ್ನು ಸ್ಥಾಪಿತ ಹಿತಾಸಕ್ತಿಗಳಿಗೆ ಮಣಿಯುವಂತೆ ಮಾಡುತ್ತದೆ, ಈ ಲೋಪಗಳ ಜೊತೆ ಅಸಮರ್ಥತೆ ಹಾಗೂ ಮಹತ್ವಾಕಾಂಕ್ಷೆ ಜೊತೆಗೂಡಿದರೆ ಅದೊಂದು ಅತ್ಯಂತ ಕೆಟ್ಟ ಸಂಯೋಜನೆಯಾಗಿರುತ್ತದೆ. ಒಂದು ವೇಳೆ ನ್ಯಾಯಾಂಗ ವ್ಯವಸ್ಥೆಯು ಹಾನಿಗೊಳಗಾಗುವುದರಿಂದ ಪಾರಾಗಬೇಕಾದರೆ ಮುಂದಿನ ಕಾರ್ಯವಿಧಾನವು ಸ್ಪಷ್ಟವಾಗುವ ತನಕ ಹಾಗೂ ಪಾರದರ್ಶಕವಾಗುವವರೆಗೆ ಮತ್ತು ಅದನ್ನು ಸಾರ್ವಜನಿಕವಾಗಿ ಚರ್ಚಿಸುವವರೆಗೆ ಯಾವುದೇ ನೇಮಕಾತಿಗಳನ್ನು ಮಾಡಕೂಡದು. ಈ ಅಪಾರದರ್ಶಕ ವ್ಯವಸ್ಥೆಯಲ್ಲಿ ನ್ಯಾಯಾಧೀಶರುಗಳ ನೇಮಕಾತಿಯನ್ನು ನಡೆಸುವುದರಿಂದ, ನ್ಯಾಯಾಂಗಕ್ಕೆ ಅಪ್ಪಟವಾಗಿ ಅರ್ಹತೆಯ ಆಧಾರದಲ್ಲಿ ವ್ಯಕ್ತಿಗಳ ನೇಮಕಾತಿಗೆ ತುಸು ಸಮಯ ಕಾಯುವುದಕ್ಕಿಂತಲೂ ಹೆಚ್ಚು ಹಾನಿಯನ್ನುಂಟು ಮಾಡಲಿದೆ.

(ಲೇಖಕ ಸಂಜಯ್ ಪಾರೀಖ್ ಅವರು, ಸುಪ್ರೀಂಕೋರ್ಟ್‌ನ ನ್ಯಾಯವಾದಿ)

ಕೃಪೆ: ಡೆಕ್ಕನ್ ಹೆರಾಲ್ಡ್

Writer - ಸಂಜಯ್ ಪಾರೀಖ್

contributor

Editor - ಸಂಜಯ್ ಪಾರೀಖ್

contributor

Similar News