ಗೋವಾ ನ್ಯಾಯಾಲಯದಿಂದ ಆರೋಪಿಗಳಿಬ್ಬರ ಖುಲಾಸೆ
ಪಣಜಿ, ಸೆ.23: ಭಾರತದ ಪ್ರವಾಸೋದ್ಯಮದ ಕರಾಳ ಮುಖವನ್ನು ಜಾಗತಿಕವಾಗಿ ಪ್ರದರ್ಶಿಸಿ, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ, 2008ರ ಬ್ರಿಟಿಷ್ ಶಾಲಾ ಬಾಲಕಿ ಸ್ಕಾರ್ಲೆಟ್ ಕೀಲಿಂಗ್‌ಳ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳಾಗಿದ್ದ ಇಬ್ಬರನ್ನು ಗೋವಾದ ನ್ಯಾಯಾಲಯವೊಂದು ಶುಕ್ರವಾರ ಖುಲಾಸೆಗೊಳಿಸಿದೆ.
ಅವರು ಎಲ್ಲ ಆರೋಪಗಳಲ್ಲೂ ನಿರ್ದೋಷಿಗಳೆಂದು ನ್ಯಾಯಾಧೀಶೆ ವಂದನಾ ತೆಂಡುಲ್ಕರ್ ತೀರ್ಪು ನೀಡಿದ್ದಾರೆ. ಸಾಮ್ಸನ್ ಡಿಸೋಜಾ ಹಾಗೂ ಪ್ಲಾಸಿಡೊ ಕಾರ್ವೆಲೊ ಎಂಬವರು ಖುಲಾಸೆಗೊಂಡವರು.
ಈ ತೀರ್ಪಿನಿಂದ ತಾನು ಸರ್ವನಾಶಗೊಂಡಂತಾಗಿದ್ದೇನೆ. ಅದರ ವಿರುದ್ಧ ಖಂಡಿತವಾಗಿ ಮೇಲ್ಮನವಿ ಸಲ್ಲಿಸುವೆನೆಂದು ಸ್ಕಾರ್ಲೆಟ್‌ಳ ತಾಯಿ ಫಿಯೋನಾ ಮೆಕ್ಕೀನ್ ಎಂಬವರು ಹೇಳಿದ್ದಾರೆ.
ತಾವು ಇಷ್ಟು ಸಮಯ ಕಾದೆವು. ಆದರೆ, ಪ್ರಯೋಜನವಾಗಲಿಲ್ಲ. ಭಾರತದ ಇಡೀ ನ್ಯಾಯಾಂಗ ವ್ಯವಸ್ಥೆ ತನ್ನನ್ನು ಸಂಪೂರ್ಣವಾಗಿ ನೆಲಕ್ಕೆ ಕೆಡವಿದೆಯೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನ್ನ ಮಗಳನ್ನು ಈ ದೇಶದಲ್ಲೇ ಕೆಲವರು ಕೊಂದಿದ್ದಾರೆ. ಅದಕ್ಕೆ ಅವರನ್ನು ಹೊಣೆ ಮಾಡಲೇಬೇಕೆಂದು ಫಿಯೋನಾ ಆಗ್ರಹಿಸಿದ್ದಾರೆ.
8 ವರ್ಷಗಳ ಹಿಂದೆ, 15ರ ಹರೆಯದ ಸ್ಕಾರ್ಲೆಟ್‌ಳ ಗಾಯಗೊಂಡಿದ್ದ ಹಾಗೂ ಅರೆ ಬೆತ್ತಲೆಯಾಗಿದ್ದ ಮೃತದೇಹ ಜನಪ್ರಿಯ ಅಂಜುನಾ ಬೀಚ್‌ನಲ್ಲಿ ಪತ್ತೆಯಾಗಿತ್ತು. ಪೊಲೀಸರು ಅದನ್ನು ಮೊದಲು ಅಪಘಾತವೆಂದು ಹೇಳಿದ್ದರೂ, ಫಿಯೋನಾ ಎರಡನೆ ಬಾರಿ ಶವ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ ಬಳಿಕ, ಬಾಲಕಿಗೆ ಮತ್ತು ಬರುವ ಔಷಧ ನೀಡಿ, ಅತ್ಯಾಚಾರ ನಡೆಸಿದ್ದುದು ಸಾಬೀತಾಗಿತ್ತು.