ರಾಜದೀಪ್ ರನ್ನು ಶಂಕಿತ ಉಗ್ರನಾಗಿಸಿದ ಪತ್ರಿಕೆಯಿಂದ ಮುಖಪುಟದಲ್ಲಿ ಕ್ಷಮೆಯಾಚನೆ

Update: 2016-09-24 11:46 GMT

ಮುಂಬೈ,ಸೆ.24: ಶಂಕಿತ ಭಯೋತ್ಪಾದಕನೆಂದು ಹಿರಿಯ ಪತ್ರಕರ್ತ ರಾಜದೀಪ್ ಸರದೇಸಾಯಿ ಅವರ ರೇಖಾಚಿತ್ರವನ್ನು ಪ್ರಕಟಿಸಿದ್ದ ಒಡಿಯಾ ಪತ್ರಿಕೆ ‘ಸಂವಾದ ’ ತನ್ನ ತಪ್ಪಿಗಾಗಿ ಶನಿವಾರದ ತನ್ನ ಸಂಚಿಕೆಯ ಮುಖಪುಟದಲ್ಲಿ ಅವರ ಕ್ಷಮೆಯನ್ನು ಯಾಚಿಸಿದೆ.

ಗುರುವಾರ ಮುಂಬೈನ ಉರಣ್ ನೌಕಾನೆಲೆಯ ಬಳಿ ಕೆಲವು ಶಂಕಿತ ಭಯೋತ್ಪಾ ದಕರನ್ನು ತಾವು ಕಂಡಿದ್ದಾಗಿ ಶಾಲಾಮಕ್ಕಳು ನೀಡಿದ್ದ ಮಾಹಿತಿಯ ಮೇರೆಗೆ ಕಟ್ಟೆಚ್ಚರವನ್ನು ವಹಿಸಲಾಗಿದ್ದು, ಐವರು ಶಂಕಿತರ ರೇಖಾಚಿತ್ರಗಳನ್ನು ಬಿಡುಗಡೆಗೊಳಿಸಲಾಗಿತ್ತು. ಒಡಿಯಾ ಪತ್ರಿಕೆಯು ಸುದ್ದಿಯ ಜೊತೆಗೆ ಶಂಕಿತ ಭಯೋತ್ಪಾದಕನನ್ನಾಗಿ ಸರದೇ ಸಾಯಿಯವರ ರೇಖಾಚಿತ್ರವನ್ನು ಪ್ರಕಟಿಸಿತ್ತು.

ಪತ್ರಿಕೆಯ ಸಂಪಾದಕರು ಪ್ರಕಟಿಸಿರುವ ಕ್ಷಮೆಯಾಚನೆಯಲ್ಲಿ, ಅದೊಂದು ಅನುದ್ದಿಷ್ಟ ತಪ್ಪು ಆಗಿತ್ತು ಎಂದು ಹೇಳಲಾಗಿದೆ.
ಕ್ಷಮೆಯಾಚನೆಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸರದೇಸಾಯಿ,‘ಒಡಿಶಾದ ‘ಸಂವಾದ ’ಸಂಪಾದಕರು ಮುಖಪುಟದಲ್ಲಿ ಬೇಷರತ್ ಕ್ಷಮೆ ಯಾಚಿಸಿರುವುದನ್ನು ಮೆಚ್ಚುತ್ತೇನೆ. ಇದು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ನಮಗೆಲ್ಲ ಪಾಠವಾಗಿದೆ ’ಎಂದಿದ್ದಾರೆ.

ಮಹಾರಾಷ್ಟ್ರ ಸರಕಾರವು ಬಿಡುಗಡೆಗೊಳಿಸಿದ್ದ ಐವರು ಶಂಕಿತ ಭಯೋತ್ಪಾದಕರ ರೇಖಾಚಿತ್ರಗಳಲ್ಲಿ ಒಡಿಯಾ ಪತ್ರಿಕೆಯು ಪ್ರಕಟಿಸಿದ್ದ ರೇಖಾಚಿತ್ರವಿರಲಿಲ್ಲ. ಶಂಕಿತ ಭಯೋತ್ಪಾದಕನೆಂದು ಸರದೇಸಾಯಿಯವರ ರೇಖಾಚಿತ್ರವನ್ನು ಸೇರಿಸಲು ಪತ್ರಿಕೆಯ ಯಾವ ಸಿಬ್ಬಂದಿ ನಿರ್ಧರಿಸಿದ್ದರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಈ ‘ಕುಚೇಷ್ಟೆ ’ಯ ಹಿಂದೆ ಬಲಪಂಥೀಯ ಸಾಮಾಜಿಕ ಮಾಧ್ಯಮ ಗ್ಯಾಂಗಿನ ಕೈವಾಡವಿದೆ ಎಂದು ದೂರಿದ್ದ ಸರದೇಸಾಯಿ ಟ್ವಿಟರ್ ಮೂಲಕ ತನ್ನ ಪ್ರತಿಭಟನೆಯನ್ನು ದಾಖಲಿಸಿದ್ದರಲ್ಲದೆ, ಪತ್ರಿಕೆಯು ತನ್ನ ಮುಖಪುಟದಲ್ಲಿ ಕ್ಷಮೆಯಾಚನೆಯನ್ನು ಪ್ರಕಟಿಸಬೇಕೆಂದು ತಾಕೀತು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News