ಕೊಯಮತ್ತೂರು ಹಿಂಸಾಚಾರ:50 ಜನರ ಬಂಧನ
Update: 2016-09-24 19:33 IST
ಕೊಯಮತ್ತೂರು,ಸೆ.24: ಗುರುವಾರ ತಡರಾತ್ರಿ ಹಿಂದು ಮುನ್ನಾಣಿ ನಾಯಕ ಸಿ. ಶಶಿಕುಮಾರ್ ಅವರ ಹತ್ಯೆಯ ಬಳಿಕ ಸಂಭವಿಸಿದ್ದ ಹಿಂಸಾಚಾರ, ದಂಗೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಸುಮಾರು 50 ಜನರನ್ನು ಕೊಯಮತ್ತೂರು ನಗರ ಪೊಲೀಸರು ಶನಿವಾರ ಬಂಧಿಸಿದ್ದು, ಇನ್ನಷ್ಟು ಬಂಧನಗಳಾಗುವ ನಿರೀಕ್ಷೆಯಿದೆ.
ಬಂಧಿತರಲ್ಲಿ ಧಾರ್ಮಿಕ ಸ್ಥಳಗಳಿಗೆ ಹಾನಿಯನ್ನುಂಟು ಮಾಡಿದವರು ಮತ್ತು ಅತ್ತುಪಾಳಂ ಟೋಲ್ ಪ್ಲಾಝಾವನ್ನು ನಾಶಗೊಳಿಸಿದ ದುಷ್ಕರ್ಮಿಗಳೂ ಸೇರಿದ್ದಾರೆ ಎಂದು ಮೂಲಗಳು ತಿಳಿಸಿದವು.
ಅಪರಿಚಿತ ದುಷ್ಕರ್ಮಿಗಳಿಂದ ಶಶಿಕುಮಾರ್ ಹತ್ಯೆಯ ಬಳಿಕ ಕೋಮು ಹಿಂಸಾಚಾರ ಭುಗಿಲೆದ್ದಿದ್ದು, ದಂಗೆಕೋರರು ಬೀದಿಗಿಳಿದು ವಾಣಿಜ್ಯ ಮಳಿಗೆಗಳು ಇತ್ಯಾದಿಗಳನ್ನು ಗುರಿಯಾಗಿಸಿಕೊಂಡು ದಾಂಧಲೆಗಿಳಿದಿದ್ದರಿಂದ ಶುಕ್ರವಾರ ನಗರದಲ್ಲಿ ಸಾಮಾನ್ಯ ಜನಜೀವನ ಸ್ಥಗಿತಗೊಂಡಿತ್ತು.