ಭಾರೀ ಮಳೆಯಿಂದಾಗಿ ಸಂಕಷ್ಟದಲ್ಲಿರುವ ಹೈದರಾಬಾದ್‌ನಲ್ಲಿ ಸೇನೆ ನಿಯೋಜನೆ
ಹೈದರಾಬಾದ್,ಸೆ.24: ತೆಲಂಗಾಣದ ರಾಜಧಾನಿ ಮತ್ತು ಇತರ ಭಾಗಗಳಲ್ಲಿ ಮಳೆರಾಯನ ಅಬ್ಬರದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಸೇನೆಯ ನಾಲ್ಕು ತುಕಡಿಗಳನ್ನು ನಿಯೋಜಿಸಲಾಗಿದೆ. ಭಾರೀ ಮಳೆಯಿಂದಾಗಿ ಜಲಾವೃತಗೊಂಡಿರುವ ಹಲವಾರು ತಗ್ಗು ಪ್ರದೇಶಗಳು ಇನ್ನೂ ಸಂಪರ್ಕವನ್ನು ಕಳೆದುಕೊಂಡಿವೆ.
ಹೈದರಾಬಾದ್‌ನ ಬೇಗಂಪೇಟ್,ನಿಝಾಮ್‌ಪೇಟ್ ಮತ್ತು ಹಕೀಮ್‌ಪೇಟ್ ಪ್ರದೇಶ ಗಳಿಗೆ ಮತ್ತು ರಂಗಾರೆಡ್ಡಿ ಜಿಲ್ಲೆಯ ಅಲ್ವಾಲ್‌ಗೆ ಯೋಧರನ್ನು ರವಾನಿಸಲಾಗಿದೆ ಎಂದು ರಕ್ಷಣಾ ಇಲಾಖೆಯು ತಿಳಿಸಿದೆ.
ಸೇನೆಯು ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆಯಲ್ಲಿ ನಿಯಂತ್ರಣ ಕೊಠಡಿಯೊಂದನ್ನು ಸ್ಥಾಪಿಸಿದ್ದು, ಪಾಲಿಕೆ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ(ಎನ್‌ಡಿಆರ್ ಎಫ್)ಯ ಅಧಿಕಾರಿಗಳ ಸಮನ್ವಯದೊಂದಿಗೆ ದಿನದ 24 ಗಂಟೆಗಳ ಕಾಲವೂ ಪರಿಸ್ಥಿತಿಯ ಮೇಲೆ ನಿಗಾಯಿರಿಸಿದೆ ಎಂದು ಅದು ಹೇಳಿದೆ.
ಯೋಧರು ಈಗಾಗಲೇ ಅಲ್ವಾಲ್‌ನ ಕೊಳಗೇರಿ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಗತ್ಯವಾದರೆ ನಿಯೋಜಿಸಲು ಇನ್ನಷ್ಟು ಯೋಧರನ್ನು ಸನ್ನದ್ಧವಾಗಿರಿಸಲಾಗಿದೆ ಎಂದಿದೆ. ಹೈದರಾಬಾದನ ಕೆಲವು ತಗ್ಗು ಪ್ರದೇಶಗಳು ಈಗಲೂ ಸಂಪರ್ಕವನ್ನು ಕಡಿದು ಕೊಂಡಿದ್ದು ಸಂತ್ರಸ್ತರಿಗೆ ಹಾಲು ಇತ್ಯಾದಿ ಆಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದು ಕೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹೈದರಾಬಾದ್ ಹಾಗೂ ರಂಗಾರೆಡ್ಡಿ, ಖಮ್ಮಮ್,ವಾರಂಗಲ್ ಮತ್ತು ಮೇಡಕ್ ಜಿಲ್ಲೆಗಳಲ್ಲಿ ಶನಿವಾರ ಶಾಲಾಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿತ್ತು.
ಶುಕ್ರವಾರ ಮೇಡಕ್ ಜಿಲ್ಲೆಯಲ್ಲಿ ಮಳೆಸಂಬಂಧಿ ಘಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದು, ಇತರ ಆರು ಜನರು ಗಾಯಗೊಂಡಿದ್ದಾರೆ.