×
Ad

ಸಹಾಯದ ನೆಪದಲ್ಲಿ ಅಂಧ ದಂಪತಿಯ ಏಕೈಕ ಪುತ್ರನನ್ನು ಅಪಹರಿಸಿದ ಮಹಿಳೆ

Update: 2016-09-25 08:53 IST

ಹೊಸದಿಲ್ಲಿ, ಸೆ.25: ಅಂಧ ದಂಪತಿಗೆ ಸಹಾಯ ಮಾಡುವ ನೆಪದಲ್ಲಿ ಮಹಿಳೆಯೊಬ್ಬರು, ನಾಲ್ಕು ವರ್ಷದ ಬಾಲಕನನ್ನು ಅಪಹರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದು 10 ದಿನ ಕಳೆದಿದ್ದು, ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ತಮ್ಮ ಭವಿಷ್ಯದ ಬಾಳಿಗೆ ಈ ಬಾಲಕ ಬೆಳಕಾಗುತ್ತಾನೆ ಎಂಬ ನಿರೀಕ್ಷೆಯಲ್ಲಿ ಜೀವನ ಸಾಗಿಸುತ್ತಿದ್ದ ಅಂಧ ದಂಪತಿಗೆ ಈ ಘಟನೆ ಬರಸಿಡಿಲಿನಂತೆ ಬಂದೆರಗಿದೆ.

ಅಸರಾಂ ಹಾಗೂ ಲಕ್ಷ್ಮಿ ದಂಪತಿಯ ಏಕೈಕ ಪುತ್ರ ಹೃತಿಕ್ ಇದುವರೆಗೂ ಪತ್ತೆಯಾಗಿಲ್ಲ. ಅಂಧ ಕಾರ್ಮಿಕರ ಸಂಘದ ಸುಮಾರು 70 ಮಂದಿಯ ಜತೆ ಅಸಾರಾಂ ಶನಿವಾರ ದೆಹಲಿ ಪೊಲೀಸ್ ಕೇಂದ್ರ ಕಚೇರಿಯ ಮುಂದೆ, ನ್ಯಾಯ ಕೇಳಲು ಸೇರಿದ್ದರು. ಆರಂಭದಲ್ಲಿ ಅವರನ್ನು ಹೊರಗೆ ಕೂರಿಸಲಾಯಿತು. ಪದೇ ಪದೇ ನಡೆಸಿದ ಪ್ರಯತ್ನದ ಬಳಿಕ ವಿಶೇಷ ಆಯುಕ್ತರ ಭೇಟಿಗೆ ಅವಕಾಶ ನೀಡಲಾಯಿತು. ಈ ಪ್ರಕರಣ ಭೇದಿಸಲು ಕಾಲಾವಕಾಶ ಬೇಕು ಎಂದು ಅವರು ಹೇಳಿದರು. ಈ ಬಾಲಕನನ್ನು ಪತ್ತೆ ಮಾಡಿದವರಿಗೆ 50 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಪ್ರಕಟಿಸಿದೆ.

ರಾಜಸ್ಥಾನದ ನೀಮ್ಡಿ ಗ್ರಾಮದ ಈ ದಂಪತಿ ಸೆಪ್ಟೆಂಬರ್ 15ರಂದು ಲಕ್ಷ್ಮೀಯವರ ಪೋಷಕರನ್ನು ನೋಡಲು ರೈಲು ನಿಲ್ದಾಣಕ್ಕೆ ಹೋಗಿದ್ದರು. 4ನೇ ನಂಬರ್ ಪ್ಲಾಟ್‌ಫಾರಂಗೆ ದಾರಿ ತೋರಿಸಬೇಕೇ ಎಂದು ಮಹಿಳೆಯೊಬ್ಬರು ಅವರನ್ನು ಕೇಳಿದರು. "ಮಹಿಳೆಯ ಸಹಾಯ ಬಯಸಿದೆವು. ಆಗ ಬಾಲಕ ನೀರು ಬೇಕೆಂದು ಕೇಳಿದ. ಮಹಿಳೆ ಆತನನ್ನು ವಾಟರ್ ಕೂಲರ್ ಬಳಿಗೆ ಕರೆದೊಯ್ದಳು. ತಕ್ಷಣ ಪ್ಲಾಟ್‌ಫಾರಂನಿಂದ ನಾಪತ್ತೆಯಾದಳು" ಎಂದು ದಂಪತಿ ವಿವರಿಸಿದ್ದಾರೆ.

"ಮಾವ ತಕ್ಷಣ, ಎಲ್ಲ ಸಹ ಪ್ರಯಾಣಿಕರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದರು. ಯಾರೂ ನೆರವಿಗೆ ಬರಲಿಲ್ಲ. ರೈಲ್ವೆ ಪೊಲೀಸರು ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ನೆರೆಯ ಪೊಲೀಸ್ ಠಾಣೆಗೆ ಹೋಗಿ ತಕ್ಷಣ ಪ್ರಕರಣ ದಾಖಲಿಸಿದೆವು ಎಂದು ಅಸರಾಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News