×
Ad

ನಾಪತ್ತೆಯಾದ ದಾಖಲೆಗಳ ಶೋಧಕ್ಕೆ ಎಫ್‌ಐಆರ್ ದಾಖಲು

Update: 2016-09-25 23:36 IST

ಹೊಸದಿಲ್ಲಿ, ಸೆ.25: ಭಾರೀ ವಿವಾದಕ್ಕೆ ಕಾರಣ ವಾಗಿರುವ ಇಶ್ರತ್ ಜಹಾನ್ 'ನಕಲಿ ಎನ್‌ಕೌಂಟರ್' ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಪತ್ತೆ ಯಾಗಿರುವ ಕೆಲವು ದಾಖಲೆಗನ್ನು ಶೋಧ ನಡೆಸುವ ನಿಟ್ಟಿನಲ್ಲಿ ಗೃಹ ಇಲಾಖೆ ಎಫ್‌ಐಆರ್ ದಾಖಲಿಸಿದೆ.

    ಇದರೊಂದಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಸೆಣಸಾಟ ಮತ್ತಷ್ಟು ತೀವ್ರವಾಗುವ ನಿರೀಕ್ಷೆಯಿದೆ. ಗೃಹ ಇಲಾಖೆಯ ಉಪಕಾರ್ಯದರ್ಶಿ ಹೊಸದಿಲ್ಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಸ್ಟೇಷನ್‌ನಲ್ಲಿ ಐಪಿಸಿ ಸೆಕ್ಷನ್ 409ರ ಅಡಿ (ಸರಕಾರಿ ನೌಕರರಿಂದ ವಿಶ್ವಾಸಾರ್ಹತೆಗೆ ಭಂಗ) ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ದಾಖಲೆಗಳು ಹೇಗೆ, ಯಾಕೆ ಮತ್ತು ಯಾವ ಸಂದರ್ಭದಲ್ಲಿ ನಾಪತ್ತೆಯಾದವು ಎಂಬುದನ್ನು ಶೋಧ ನಡೆಸುವಂತೆ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
 ದಾಖಲೆಗಳನ್ನು 2009ರ ಸೆಪ್ಟಂಬರ್‌ನಲ್ಲಿ ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶರಹಿತ ವಾಗಿ ಕಳೆದುಹಾಕಲಾಗಿದೆ ಎಂದು ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದ ತನಿಖಾ ಸಮಿತಿಯ ವರದಿಯಲ್ಲಿ ಉಲ್ಲೇಖಿ ಸಲಾದ ಬಳಿಕ ಗೃಹ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. 2009ರಲ್ಲಿ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಗೃಹ ಸಚಿವರಾಗಿದ್ದರು.
      
  
  ಇಶ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವಾಲಯದ ಕಡತದಿಂದ ನಾಪತ್ತೆಯಾಗಿರುವ ಐದು ದಾಖಲೆಗಳಲ್ಲಿ ಒಂದು ಮಾತ್ರ ಪತ್ತೆಯಾಗಿದೆ ಎಂದು ತನಿಖಾ ಸಮಿತಿ ತಿಳಿಸಿದೆ. ಈ ಸಮಿತಿಯು ಮೂರು ತಿಂಗಳ ತನಿಖೆಯ ಬಳಿಕ ತನ್ನ ವರದಿಯನ್ನು ಕಳೆದ ಜೂನ್‌ನಲ್ಲಿ ಸರಕಾರಕ್ಕೆ ಸಲ್ಲಿಸಿತ್ತು. ಆದರೆ ಈ ವರದಿಯಲ್ಲಿ ಚಿದಂಬರಂ ಅಥವಾ ಅಂದಿನ ಯುಪಿಎ ಸರಕಾರದ ಇತರ ಯಾವುದೇ ಸಚಿವರ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಗೃಹ ಇಲಾಖೆಯ ಅಂದಿನ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಸೇರಿದಂತೆ ಇದೀಗ ನಿವೃತ್ತರಾಗಿರುವವರನ್ನೂ ಒಳಗೊಂಡು 11 ಮಂದಿ ಅಧಿಕಾರಿಗಳ ಹೇಳಿಕೆಯನ್ನು ಪಡೆದ ಬಳಿಕ ಸಿದ್ದಪಡಿಸಿರುವ 52 ಪುಟಗಳ ವರದಿಯಲ್ಲಿ - 2009ರ ಸೆ.18ರಿಂದ 28ರ ಅವಧಿಯಲ್ಲಿ ದಾಖಲೆಗಳು ನಾಪತ್ತೆಯಾಗಿವೆ ಎಂದು ಉಲ್ಲೇಖಿಸಲಾಗಿದೆ. 2009ರ ಸೆ.18ರಂದು ಅಂದಿನ ಗೃಹಕಾರ್ಯದರ್ಶಿ ಅಂದಿನ ಅಟಾರ್ನಿ ಜನರಲ್‌ಗೆ ಕಳಿಸಿದ ಪತ್ರ ಮತ್ತು ಅದರ ಜೊತೆಗಿದ್ದ ಅಡಕ, ಅಂದೇ ಕಳಿಸಲಾದ ಇನ್ನೊಂದು ಪತ್ರದ ಕಚೇರಿ ಪ್ರತಿ, ಅಟಾರ್ನಿ ಜನರಲ್ ಪರಿಶೀಲಿಸಿದ ಅಫಿದಾವಿತ್ ಕರಡು ಪ್ರತಿ, 2009ರ ಸೆ.24ರಂದು ಅಂದಿನ ಗೃಹ ಸಚಿವರಿಂದ 'ತಿದ್ದುಪಡಿ ಮಾಡಲ್ಪಟ್ಟ' ಅಫಿದಾವಿತ್ ಕರಡು ಪ್ರತಿ, 2009ರ ಸೆ.29ರಂದು ಗುಜರಾತ್ ಹೈಕೋರ್ಟ್‌ನಲ್ಲಿ ಸಲ್ಲಿಸಲ್ಪಟ್ಟ ಅಫಿದಾವಿತ್‌ನ ಕಚೇರಿ ಪ್ರತಿಗಳು ನಾಪತ್ತೆಯಾಗಿವೆ. 2009ರ ಸೆ.29ರಂದು ಗುಜರಾತ್ ಹೈಕೋರ್ಟ್ ಗೆ ಸಲ್ಲಿಸಲಾಗಿದ್ದ ದ್ವಿತೀಯ ಅಫಿದಾವಿತ್ ಮೊದಲ ಅಫಿದಾವಿತ್‌ಗಿಂತ ವಿಭಿನ್ನವಾಗಿದ್ದು ಇದರಲ್ಲಿ ಇಶ್ರತ್ ಓರ್ವ ಎಲ್‌ಇಟಿ (ಲಷ್ಕರೆ-ತಯೀಬಾ) ಕಾರ್ಯಕರ್ತೆ ಎಂಬುದಕ್ಕೆ ಯಾವುದೇ ನಿರ್ಣಾಯಕ ಸಾಕ್ಷಿ ಇಲ್ಲ ಎಂದು ತಿಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News