ಸಾಕ್ಷಿ ಮಲಿಕ್ ಕೋಚ್ ಗೆ ಇನ್ನೂ ಸಿಕ್ಕಿಲ್ಲ ಘೋಷಿತ ನಗದು ಬಹುಮಾನ !

Update: 2016-09-26 04:42 GMT

ಹೊಸದಿಲ್ಲಿ, ಸೆ.26; ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಯಶಸ್ಸಿನ ಪ್ರಮುಖ ಸೂತ್ರಧಾರನೆಂದೇ ಪರಿಗಣಿಸಲ್ಪಟ್ಟಿರುವ ಭಾರತೀಯ ಮಹಿಳಾ ಫ್ರೀಸ್ಟೈಲ್ ಕುಸ್ತಿ ತಂಡದ ಕೋಚ್ ಕುಲದೀಪ್ ಮಲಿಕ್ ಅವರಿಗೆ ಘೊಷಿಸಲ್ಪಟ್ಟು ನಗದು ಬಹುಮಾನ ಇನ್ನೂ ಸಿಕ್ಕಿಲ್ಲ.

ರಿಯೋ ಒಲಿಂಪಿಕ್ಸ್ ಬಳಿಕ ಸಾಕ್ಷಿ ಅವರೊಂದಿಗೆ ಸ್ವದೇಶಕ್ಕೆ ಮರಳಿದ ಕುಲದೀಪ್ ಅವರಿಗೆ ಹರ್ಯಾಣ ಸರಕಾರ ಹತ್ತು ಲಕ್ಷ ರೂ.ಚೆಕ್ ನ ನಕಲು ಪ್ರತಿಯೊಂದನ್ನು ಬಹದುರ್ಗಾಹ್ ನಗರದಲ್ಲಿ ನಡೆದ ಸನ್ಮಾನ ಸಮಾರಂಭವೊಂದರಲ್ಲಿ ಹಸ್ತಾಂತರಿಸಿತ್ತು. ಆದರೆ ಇದೀಗ ಈ ಸಮಾರಂಭ ನಡೆದು ಸರಿ ಸುಮಾರು ಒಂದು ತಿಂಗಳಿಗಿಂತ ಹೆಚ್ಚೇ ಆಗಿದ್ದರೂ ನೈಜ ಚೆಕ್ ಇನ್ನೂ ಅವರ ಕೈ ಸೇರಿಲ್ಲ.

ಆಗಸ್ಟ್ 29 ರಂದು ಸಾಕ್ಷಿಗೆ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸುವ ವೇಳೆಗೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಇದೀಗ ಉತ್ತರ ರೈಲ್ವೆಯಲ್ಲಿ ಮುಖ್ಯ ಟಿಕೆಟ್ ಇನ್ಸ್ಪೆಕ್ಟರ್ ಆಗಿರುವ ಕುಲದೀಪ್ ಅವರಿಗೆ ಭಡ್ತಿ ನೀಡುವುದಾಗಿ ಆಶ್ವಾಸನೆ ನೀಡಿದ್ದರೂ ಅದಿನ್ನೂ ಭರವಸೆಯಾಗಿಯೇ ಉಳಿದಿದೆ.

ಹರ್ಯಾಣ ಸರಕಾರ ಹಾಗೂ ರೈಲ್ವೇ ಕ್ರೀಡಾ ಉತ್ತೇಜನಾ ಮಂಡಳಿಯನ್ನು ಸಂಪರ್ಕಿಸುವ ಅವರ ಪ್ರಯತ್ನ ಇನ್ನೂ ಸಫಲವಾಗಿಲ್ಲ. ‘‘ಸಾಕ್ಷಿಗೆ ವಿಲಾಸಿ ಬಿಎಂಡಬ್ಲ್ಯೂ ಕಾರು ಸಹಿತ ಅನೇಕ ನಗದು ಬಹುಮಾನಗಳು ಸಿಕ್ಕಿರಬಹುದು. ಆದರೆ ನನಗೆ ನೀಡಲಾದ ಯಾವೊಂದು ಆಶ್ವಾಸನೆಗಳೂ ಈಡೇರಿಲ್ಲ’’ ಎಂದು 2011 ರಿಂದ ಸಾಕ್ಷಿಯ ಕೋಚ್ ಆಗಿರುವ ಕುಲದೀಪ್ ನೋವಿನಿಂದ ನುಡಿದಿದ್ದಾರೆ. ಕುಲದೀಪ್ ಅವರಿಗೆ 2010 ರಲ್ಲಿ ಧ್ಯಾನ್ ಚಂದ್ ಪ್ರಶಸ್ತಿ ದೊರೆತಿತ್ತು.

ಸಾಕ್ಷಿ ತಮಗೆ ಬಹಳಷ್ಟು ಗೌರವ ನೀಡುತ್ತಾರೆಂದು ಹೇಳಿದ ಕುಲದೀಪ್, ಸಾಕ್ಷಿಗೆ ಸಿಕ್ಕಿದ ಕಂಚು ತನ್ನ ಪಾಲಿನ ದೊಡ್ಡ ಬಹುಮಾನವೆಂದು ತಾವು ಯಾವತ್ತೂ ತಿಳಿಯುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News