ಸ್ವಚ್ಛ ಭಾರತ ಅಭಿಯಾನದಲ್ಲಿ ಬಿಜೆಪಿ ಆಡಳಿತದ ಪಾಲಿಕೆಗಳೇ ವಿಫಲ: ದಿಲ್ಲಿ ಸಚಿವ

Update: 2016-09-26 13:44 GMT

ಹೊಸದಿಲ್ಲಿ, ಸೆ.26: ದಿಲ್ಲಿಯ ಅಸ್ವಚ್ಛತೆಗೆ ನಗರಾಳಿತ ಸಂಸ್ಥೆಗಳನ್ನು ದೂಷಿಸಿರುವ ಲೋಕೋಪಯೋಗಿ ಸಚಿವ ಸತ್ಯೇಂದರ್ ಜೈನ್, ಬಿಜೆಪಿ ಆಡಳಿತದ ಮಹಾನಗರ ಪಾಲಿಕೆಗಳು ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛಭಾರತ ಅಭಿಯಾನದಲ್ಲಿ ದಯನೀಯವಾಗಿ ಸೋತಿವೆಯೆಂದು ಸೋಮವಾರ ಟೀಕಿಸಿದ್ದಾರೆ.

ಮೂರು ಮಹಾನಗರ ಪಾಲಿಕೆಗಳು ‘ಜನರಿಗೆ ಕಿರುಕುಳ ನೀಡುವುದು ಹಾಗೂ ಭ್ರಷ್ಟಾಚಾರದಿಂದ ಹಣ ಮಾಡುವುದರ ಹೊರತು ಬೇರೇನೂ ಮಾಡಿಲ್ಲ. ಮೂರು ಪಾಲಿಕೆಗಳಲ್ಲೂ ಬಿಜೆಪಿಯ ಆಡಳಿತವಿದೆ. ಅವು ಸ್ವಚ್ಛಭಾರತ ಅಭಿಯಾನದಲ್ಲಿ ದಯನೀಯವಾಗಿ ವಿಫಲವಾಗಿವೆ. ಅವು ದೇಶದ ವರ್ಚಸ್ಸಿಗೆ ಧಕ್ಕೆ ತರುತ್ತಿವೆಯಲ್ಲದೆ, ಬಿಜೆಪಿಗೆ ಕನ್ನಡಿ ಹಿಡಿದಿವೆಯೆಂದು ಅವರು ಆರೋಪಿಸಿದ್ದಾರೆ.

ಸ್ವಚ್ಛತೆಯ ವಿಚಾರದಲ್ಲಿ ಸೋಮವಾರ ಲೆಫ್ಟಿನೆಂಟ್ ಗವರ್ನರ್ ನಝೀಬ್‌ಜಂಗ್‌ರನ್ನು ಭೇಟಿ ಮಾಡಿದ ಬಳಿಕ ಜೈನ್‌ರ ಈ ಟೀಕೆ ಹೊರಬಿದ್ದಿದೆ.

ದಿಲ್ಲಿಯ ಸ್ವಚ್ಛತಾ ಪರಿಸ್ಥಿತಿ ತೀರಾ ಹದಗೆಟ್ಟಿವೆ. ದಿಲ್ಲಿಯ ತುಂಬ ತ್ಯಾಜ್ಯವೇ ತುಂಬಿದೆ. ಜಂಗ್ ಹಾಗೂ ತಾನು ಇಂತಹ ಪರಿಸ್ಥಿತಿಯ ಬಗ್ಗೆ ಚಿಂತೆಗೊಂಡಿದ್ದೇವೆ. ನಗರದಲ್ಲಿ ವ್ಯಾಪಿಸುತ್ತಿರುವ ಸಾಂಕ್ರಾಮಿಕ ರೋಗಗಳ ಹಿನ್ನೆಲೆಯಲ್ಲಿ ಕನಿಷ್ಠ ತಿಂಗಳಿಗೊಂದು ಬಾರಿಯಾದರೂ ಸ್ವಚ್ಛತೆಯ ಕಡೆಗೆ ಗಮನ ನೀಡುವಂತೆ ಮಹಾನಗರಪಾಲಿಕೆಗಳಿಗೆ ಲೆಫ್ಟಿನೆಂಟ್ ಗವರ್ನರ್ ಆದೇಶ ನೀಡಿದ್ದಾರೆಂದು ಜೈನ್ ಹೇಳಿದ್ದಾರೆ.

ಸ್ವಚ್ಛತೆಯ ವಿಷಯದಲ್ಲಿ ಮಹಾನಗರಪಾಲಿಕೆಗಳ ಮೇಲೆ ಒತ್ತಡ ಹೇರುವ ಸಲುವಾಗಿ ಆಮ್‌ಆದ್ಮಿ ಪಕ್ಷವು(ಎಎಪಿ) ಕಳೆದ ವಾರ ‘ತ್ಯಾಜ್ಯವನ್ನು ಗುರುತಿಸಿ’ ಎಂಬ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News