×
Ad

‘ಬೆಳೆ ಇಳುವರಿ ಹೆಚ್ಚಳಕ್ಕೆ ವೈಜ್ಞಾನಿಕ ಪರಿಹಾರ ಅಗತ್ಯ’

Update: 2016-09-26 23:32 IST

  ಹೊಸದಿಲ್ಲಿ,ಸೆ.26: ಕೃಷಿಭೂಮಿ ಮತ್ತು ಜಲ ಸಂಪನ್ಮೂಲಗಳು ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಬೆಳೆ ಇಳುವರಿಯನ್ನು ಹೆಚ್ಚಿಸಲು ವೈಜ್ಞಾನಿಕ ಪರಿಹಾರವನ್ನು ಕಂಡು ಹಿಡಿಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿ ಸಂಶೋಧಕರಿಗೆ ಸೂಚಿಸಿದರು. ಇದೇ ವೇಳೆ ತಂತ್ರಜ್ಞಾನದ ಲಾಭವನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಅಗತ್ಯಕ್ಕೂ ಅವರು ಒತ್ತು ನೀಡಿದರು.

  ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್‌ಐಆರ್)ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಸಂಶೋಧನೆಗಳ ಫಲಗಳನ್ನು ಜನರಿಗೆ ಲಭ್ಯವಾಗಿಸಲು ಅವುಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದುವುದು ಮುಖ್ಯವಾಗಿದೆ ಎಂದರು.
ದೇಶೀಯ ಅಗತ್ಯಗಳನ್ನು ಪೂರೈಸುವ ಜೊತೆಗೆ ವಿದೇಶಗಳಿಗೂ ರಫ್ತು ಮಾಡುವಂತಾಗಲು ತರಕಾರಿಗಳ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಶೋಧನಾ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಂತೆ ಸಿಎಸ್‌ಐಆರ್ ಅಧ್ಯಕ್ಷರೂ ಆಗಿರುವ ಪ್ರಧಾನಿ ವಿಜ್ಞಾನಿಗಳಿಗೆ ಸೂಚಿಸಿದರು.
ವಿಶೇಷವಾಗಿ ಆರೋಗ್ಯ ರಕ್ಷಣೆ, ಕೃಷಿ, ಜಲ ಸಂಪನ್ಮೂಲಗಳು, ತ್ಯಾಜ್ಯ ನಿರ್ವಹಣೆ ಮತ್ತು ಗಂಗಾ ಶುದ್ಧೀಕರಣ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆಗಳನ್ನು ನಡೆಸುವಂತೆ ಅವರು ಒತ್ತಿ ಹೇಳಿದರು.
ತಂತ್ರಜ್ಞಾನವೊಂದರ ಲಾಭಗಳು ಶ್ರೀಸಾಮಾನ್ಯನಿಗೆ ತಲುಪಿದಾಗ ಮಾತ್ರ ಅದು ಯಶಸ್ವಿಯೆಂದು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ನಾವು ಏನನ್ನೋ ಆವಿಷ್ಕರಿಸಿರುತ್ತೇವೆ. ಆದರೆ ಶ್ರೀಸಾಮಾನ್ಯನಿಗೆ ಅದರ ಮಾಹಿತಿಯೇ ಇರುವುದಿಲ್ಲ. ಸಾಮಾನ್ಯ ಜನರ ಅಗತ್ಯಕ್ಕೆ ತಕ್ಕಂತೆ ಅದನ್ನು ಪರಿಷ್ಕರಿಸಬಹುದೇ ಎಂದು ಅವರು ವಿಜ್ಞಾನಿ ಸಮುದಾಯವನ್ನು ಪ್ರಶ್ನಿಸಿದರು.
ಕ್ರೀಡಾ ಸಂಶೋಧನೆ ಮತ್ತು ದೀರ್ಘ ಬಾಳಿಕೆಯ ಮೊಬೈಲ್ ಫೋನ್ ಬ್ಯಾಟರಿಗಳ ತಯಾರಿಕೆಯಂತಹ ಹೊಸ ಕ್ಷೇತ್ರಗಳಲ್ಲಿ ಅನ್ವೇಷಣೆ ನಡೆಸುವಂತೆ ಸಿಎಸ್‌ಐಆರ್‌ಗೆ ಪ್ರಧಾನಿ ಸೂಚಿಸಿದರು.
ಸಂಶೋಧನಾ ಸಂಸ್ಥೆಗಳು, ಕೈಗಾರಿಕೆ, ಎನ್‌ಜಿಒಗಳು, ಸೇವಾ ಪೂರೈಕೆದಾರರು ಮತ್ತು ಬಳಕೆದಾರರ ನಡುವೆ ವೌಲಿಕ ಸರಪಳಿಯೊಂದನ್ನು ಸೃಷ್ಟಿಸುವ ಅಗತ್ಯಕ್ಕೂ ಅವರು ಒತ್ತು ನೀಡಿದರು.

ಸರಕಾರವು ರೈತರ ಆದಾಯವನ್ನು 2022ರ ವೇಳೆಗೆ ದುಪ್ಪಟ್ಟುಗೊಳಿಸಲು ಉದ್ದೇಶಿಸಿದೆ ಎಂದ ಅವರು, ಇದಕ್ಕಾಗಿ ಬೆಳೆಗಳ ಕೆಲವು ನೂತನ ಮಾದರಿಗಳನ್ನು ಅಭಿವೃದ್ಧಿಗೊಳಿಸುವಂತೆ ವಿಜ್ಞಾನಿಗಳಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News