ಮಾಲೆಗಾಂವ್ ಸ್ಫೋಟದ ಆರೋಪಿ ಪುರೋಹಿತ್‌ಗೆ ಜಾಮೀನು ನೀಡಲು ನಕಾರ
ಮುಂಬೈ,ಸೆ.26: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲೋರ್ವನಾಗಿರುವ ಕಪ್ರಸಾದ್ ಎಸ್.ಪುರೋಹಿತ್(ನಿವೃತ್ತ) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿಯ ವಿಶೇಷ ಎನ್‌ಐಎ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ.
ಎನ್‌ಐಎ ತನ್ನ ವಿರುದ್ಧದ ಮೋಕಾ ಅಡಿಯ ಆರೋಪಗಳನ್ನು ಕೈಬಿಟ್ಟಿರುವುದರಿಂದ ಮತ್ತು ಅಕ್ರಮ ಚಟುವಟಿಕೆಗಳ(ತಡೆ)ಕಾಯ್ದೆಯಡಿ ಕಾನೂನು ಕ್ರಮಕ್ಕೆ ಅನುಮತಿಯು ದೋಷಪೂರಿತವಾಗಿರುವುದರಿಂದ ತನಗೆ ಜಾಮೀನು ನೀಡುವಂತೆ ಪುರೋಹಿತ್ ಕೋರಿದ್ದ.
ಸ್ಫೋಟ ಪ್ರಕರಣದಲ್ಲಿ ತನ್ನ ಪಾತ್ರವೇನೂ ಇಲ್ಲ ಮತ್ತು ಯಾವುದೇ ವಿಚಾರಣೆಯಿಲ್ಲದೆ ಕಳೆದ ಏಳು ವರ್ಷಗಳಿಂದಲೂ ತಾನು ಜೈಲಿನಲ್ಲಿ ಕೊಳೆಯುತ್ತಿದ್ದೇನೆ ಎಂದೂ ಆತ ಅರ್ಜಿಯಲ್ಲಿ ಹೇಳಿಕೊಂಡಿದ್ದ. ಜಾಮೀನು ಅರ್ಜಿಯನ್ನು ವಿರೋಧಿಸಿದ ಎನ್‌ಐಎ,ಆರೋಪಿಯ ವಾದಗಳನ್ನು ವಿಚಾರಣೆಯ ವೇಳೆ ಪರಿಶೀಲಿಸಬೇಕೇ ಹೊರತು ಈ ಹಂತದಲ್ಲಿ ಅಲ್ಲ. ಅಲ್ಲದೆ ಆತನ ವಿರುದ್ಧ ಸಾಕಷ್ಟು ಸಾಕ್ಷಾಧಾರಗಳನ್ನೂ ತಾನು ಸಂಗ್ರಹಿಸಿದ್ದೇನೆ ಎಂದು ಹೇಳಿತು. ಎನ್‌ಐಎ ವಾದವನ್ನು ಪುರಸ್ಕರಿಸಿದ ವಿಶೇಷ ನ್ಯಾಯಾಧೀಶ ಎಸ್.ಡಿ.ತೆಕಾಲೆ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದರು.