ತಮ್ಮ ವಿರುದ್ಧ ಹೆತ್ತವರಿಗೆ ದೂರು ನೀಡಿದ ಶಿಕ್ಷಕನಿಗೆ ಘೋರ ಶಿಕ್ಷೆ ನೀಡಿದ ವಿದ್ಯಾರ್ಥಿಗಳು

Update: 2016-09-27 07:06 GMT

ಹೊಸದಿಲ್ಲಿ, ಸೆ.27: ಶಾಲೆಯಲ್ಲಿ ಅಶಿಸ್ತಿನ ನಡವಳಿಕೆ ತೋರಿಸಿದ್ದಾರೆಂದು ಶಿಕ್ಷಕರೊಬ್ಬರು ಇಬ್ಬರು ವಿದ್ಯಾರ್ಥಿಗಳ ಹೆತ್ತವರಿಗೆ ದೂರಿದ್ದೇ ಅವರಿಗೆ ಮುಳುವಾದ ಘಟನೆ ರಾಜಧಾನಿಯಿಂದ ವರದಿಯಾಗಿದೆ.

ತಮ್ಮ ವಿರುದ್ಧ ದೂರಿದ್ದಾರೆಂಬ ಒಂದೇ ಕಾರಣಕ್ಕೆ 12 ನೇ ತರಗತಿಯ ವಿದ್ಯಾರ್ಥಿಗಳಿಬ್ಬರು ಶಿಕ್ಷಕನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ. ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಅಪರಾಧ ನಡೆದ ದಕ್ಷಿಣ ದಿಲ್ಲಿಯ ನಂಗ್ಲೋಯ್ ನಲ್ಲಿರುವ ಸರಕಾರಿ ಬಾಲಕರ ಹಿರಿಯ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಾಗ ಸುಮಾರು ಆರರಿಂದ ಏಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರೆಂದು ತಿಳಿದು ಬಂದಿದೆ.

ಸೋಮವಾರ ಶಾಲೆಯಲ್ಲಿ ಪರೀಕ್ಷೆ ನಡೆದಿದ್ದು, ಪರೀಕ್ಷೆಯಾದ ಕೂಡಲೇ ಚೂರಿಯೊಂದಿಗೆ ತರಗತಿಗೆ ನುಗ್ಗಿದ ಆರೋಪಿ ವಿದ್ಯಾರ್ಥಿಗಳು ತಮ್ಮ ಹಿಂದಿ ಶಿಕ್ಷಕ ಮುಖೇಶ್ ಕುಮಾರ್ ಅವರಿಗೆ ಇರಿದೇ ಬಿಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ಆರೋಪಿ ವಿದ್ಯಾರ್ಥಿಗಳಲ್ಲೊಬ್ಬನನ್ನು ಅನಿಯಮಿತವಾಗಿ ತರಗತಿಗೆ ಹಾಜರಾಗುವ ತಪ್ಪಿಗಾಗಿ ಡಿಬಾರ್ ಮಾಡಲಾಗಿತ್ತೆಂದು ಶಾಲಾ ಪ್ರಿನ್ಸಿಪಾಲ್ ಬದನ್ ಸಿಂಗ್ ಹೇಳಿದ್ದಾರೆ. ಆರೋಪಿ ವಿದ್ಯಾರ್ಥಿಗಳು ಶಾಲೆಯಲ್ಲಿನ ಇತರ ಶಿಕ್ಷಕರಿಗೂ ತಮ್ಮ ವಿರುದ್ಧ ಕ್ರಮ ಕೈಗೊಳ್ಳಬಾರದೆಂದು ಹೇಳಿ ಬೆದರಿಸುತ್ತಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News