ಇದು ತಮಿಳು ವ್ಯಾಘ್ರ. ಆದರೆ ಎಲ್ಟಿಟಿಇ ಅಲ್ಲ !

Update: 2016-09-27 10:09 GMT

ಉದಯಪುರ, ಸೆ.27: ಚೆನ್ನೈ ನಗರದ ಅರಿಗ್ನರ್ ಅಣ್ಣಾ ಮೃಗಾಲಯದಿಂದ ಇತ್ತೀಚೆಗೆ ಐದು ವರ್ಷದ ರಾಮ ಎಂಬ ಬಿಳಿ ಹುಲಿಯನ್ನು ಉದಯಪುರದಲ್ಲರುವ ಸಜ್ಜಂಘರ್ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಾಣಿಗಳ ವಿನಿಮಯ ಕಾರ್ಯಕ್ರಮದಂಗವಾಗಿ ಹಸ್ತಾಂತರಿಸಲಾಗಿತ್ತು. ಈ ಹುಲಿಯ ಬದಲಾಗಿ ಚೆನ್ನೈ ಮೃಗಾಲಯಕ್ಕೆ ಜೋಧಪುರ ಹಾಗೂ ಜೈಪುರದಿಂದ ಎರಡು ನರಿಗಳನ್ನು ಕಳುಹಿಸಲಾಗಿತ್ತು.

ಇದರಲ್ಲಿ ವಿಶೇಷವೇನೂ ಇಲ್ಲದೇ ಇದ್ದರೂ ಚೆನ್ನೈನಿಂದ ಉದಯಪುರಕ್ಕೆ ಕಳುಹಿಸಲಾಗಿರುವ ಬಿಳಿ ಹುಲಿರಾಜನಿಗೆ ತಮಿಳು ಬಿಟ್ಟು ಬೇರೆ ಯಾವುದೇ ಭಾಷೆ ಅರ್ಥವಾಗದೇ ಇರುವುದು ಈಗ ಸಮಸ್ಯೆಗೆ ಕಾರಣವಾಗಿದೆ. ಸದ್ಯಕ್ಕೆ ಚೆನ್ನೈನಲ್ಲಿದ್ದ ರಾಮನ ಮೇಲ್ವಿಚಾರಕ ಚೆಲ್ಲನ್ ಆತನ ಜತೆ ಉದಯಪುರಕ್ಕೆ ಬಂದಿದ್ದಾನೆ. ಆದರೆ ಆತನಿರುವ ತನಕ ಸರಿ. ಮುಂದೇನು ಎಂಬ ಪ್ರಶ್ನೆ ಎದುರಾಗಿದೆ.

ಈಗ ಒಂದೋ ಹುಲಿ ಅಲ್ಲಿನ ಮೇವಾರಿ ಭಾಷೆ ಕಲಿಯಬೇಕು, ಇಲ್ಲವೇ ಆತನ ಮೇಲ್ವಿಚಾರಕರು ತಮಿಳು ಕಲಿಯಬೇಕಾಗಿದೆ. ಉದಯಪುರ ಪಾರ್ಕಿಗೆ ಬಿಳಿ ಹುಲಿಯ ಆಗಮನದಿಂದ ಅಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚಾಗುವುದೆಂಬ ವಿಶ್ವಾಸದಿಂದ ಕೇಂದ್ರ ಮೃಗಾಲಯ ಪ್ರಾಧಿಕಾರ ಈ ಪ್ರಾಣಿಗಳ ವಿನಿಮಯ ಕಾರ್ಯಕ್ರಮಕ್ಕೆ ಒಪ್ಪಿಕೊಂಡಿತ್ತು. ಅಲ್ಲಿ ಈಗಾಗಲೇ ಒಂದು ಹೆಣ್ಣು ಹುಲಿ ದಾಮಿನಿಯಿದ್ದು ಈಗ ರಾಮನ ಆಗಮನದಿಂದ ಹುಲಿಗಳ ಸಂತತಿ ಹೆಚ್ಚಾಗುವ ನಿರೀಕ್ಷೆ ಅಲ್ಲಿನ ಅಧಿಕಾರಿಗಳದ್ದು.

ದಾಮಿನಿಯನ್ನು ಪುಣೆ ಮೃಗಾಲಯದಿಂದ ತರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News