ತಾನೇ ದಾಳಿಯ 'ಸಾಮ್ನಾ' ಮಾಡಬೇಕಾಯಿತು ಶಿವಸೇನೆಗೆ !

Update: 2016-09-27 17:41 GMT

ಮುಂಬೈ,ಸೆ.27: ಇಷ್ಟೆಲ್ಲ ವರ್ಷಗಳ ಕಾಲ ತನ್ನ ಕಾರ್ಯಕರ್ತರು ಆಗಾಗ್ಗೆ ವಿರೋಧಿಗಳ ಕಚೇರಿ,ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸುತ್ತಿದ್ದುದನ್ನೇ ನೋಡುತ್ತ ಬಂದಿದ್ದ ಶಿವಸೇನೆಗೆ ಮಂಗಳವಾರ ಹೊಸ ಅನುಭವ ಕಾದಿತ್ತು. ಮಹಾರಾಷ್ಟ್ರದ ಜನಸಂಖ್ಯೆಯಲ್ಲಿ ಶೇ.30ರಷ್ಟಿರುವ ಪ್ರಬಲ ಮರಾಠಾ ಜಾತಿಯು ಸರಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಗಳಲ್ಲಿ ಮೀಸಲಾತಿಗಾಗಿ ಆಗ್ರಹವನ್ನು ಮಂಡಿಸಿ ನಡೆಸಿದ್ದ ಪ್ರತಿ ಭಟನೆಯ ಕುರಿತಂತೆ ವ್ಯಂಗ್ಯಚಿತ್ರದಲ್ಲಿ ಅಣಕಿಸಿದ್ದ ಶಿವಸೇನೆಯ ಮುಖವಾಣಿ ‘ಸಾಮನಾ’ದ ಇಲ್ಲಿಯ ಕಚೇರಿಯೊಂದರ ಮೇಲೆ ಕಲ್ಲುತೂರಾಟ ನಡೆದಿದೆ.
ಮೇಲ್ವರ್ಗದ ಮರಾಠಾ ಸಮುದಾಯವನ್ನು ಪ್ರತಿನಿಧಿಸುವ ಸಂಭಾಜಿ ಬ್ರಿಗೇಡ್‌ನ ಕಾರ್ಯಕರ್ತರು ಈ ದಾಳಿಯನ್ನು ನಡೆಸಿದ್ದಾರೆ. 2004ರಲ್ಲಿ ಇದೇ ಸಂಘಟನೆ ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸಿದ್ದಾರೆಂದು ಆರೋಪಿಸಿ ಇತಿಹಾಸ ತಜ್ಞ ಜೇಮ್ಸ್ ಲೇಯ್ನೆ ವಿರುದ್ಧ ಪ್ರತಿಭಟಿಸಲು ಪುಣೆಯ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿತ್ತು.
 ಇಂದು ಸಾಮನಾದ ಕಚೇರಿಯ ಮೇಲೆ ನಡೆದ ದಾಳಿಯಲ್ಲಿ ಕೆಲವು ಕಿಟಕಿ ಗಾಜು ಗಳು ಹುಡಿಯಾಗಿವೆ. ದಾಳಿ ನಡೆಸಿದ್ದ ಸಂಭಾಜಿ ಬ್ರಿಗೇಡ್‌ನ ಮೂವರು ಕಾರ್ಯ ಕರ್ತರು ಪರಾರಿಯಾಗುವಲ್ಲಿ ಸಫಲರಾಗಿದ್ದಾರೆ.
ಸಾಮನಾದಲ್ಲಿ ಪ್ರಕಟವಾಗಿರುವ ವ್ಯಂಗ್ಯಚಿತ್ರವನ್ನು ನಾವು ಖಂಡಿಸುತ್ತೇವೆ. ಶಿವಸೇನೆಯ ಕಾರ್ಯಾಧ್ಯಕ್ಷ ಉದ್ಧವ ಠಾಕ್ರೆ ಮತ್ತು ಸಾಮನಾದ ಕಾರ್ಯನಿರ್ವಾಹಕ ಸಂಪಾದಕ ಸಂಜಯ ರಾವುತ್ ಮಹಾರಾಷ್ಟ್ರದ ಮಹಿಳೆಯರ ಕ್ಷಮೆಯನ್ನು ಯಾಚಿಸಬೇಕು ಎಂದು ಬ್ರಿಗೇಡ್‌ನ ವಕ್ತಾರ ಶಿವಾನಂದ ಭಾನುಸೆ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ತನ್ಮಧ್ಯೆ ಶಿವಸೇನೆಯು, ವ್ಯಂಗ್ಯಚಿತ್ರವನ್ನು ವ್ಯಂಗ್ಯಚಿತ್ರವೆಂದೇ ನೋಡಬೇಕು ಮತ್ತು ಮರಾಠಾ ವಿರೋಧಿ ಎಂಬ ಸಂಕೇತವಾಗಿ ಅಲ್ಲ ಎಂದು ಪ್ರಕಟಣೆಯೊಂದರಲ್ಲಿ ಸಮಜಾಯಿಷಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News