ಸುಖ ನಿದ್ದೆಯಲ್ಲಿದ್ದಂಥ ಅವರ ಮುಖ

Update: 2016-09-28 18:04 GMT

‘‘ಸಾಕು, ನಿದ್ದೆ ಮಾಡಿದ್ದು ಏಳು. ಹೆಣ್ಣು ಮಕ್ಕಳು ಸೂರ್ಯ ಹುಟ್ಟಿದ ಮೇಲೆ ಹೀಗೆ ನಿದ್ದೆ ಮಾಡಬಾರದು, ಏಳು.’’
ತಟ್ಟನೆ ಎಚ್ಚರವಾಗಿ ಕಣ್ಣು ಬಿಟ್ಟಾಗ ಬೊಚ್ಚು ಬಾಯಿ ಅಗಲಿಸಿ ಅಜ್ಜಿ ನಗುತ್ತಾ ಕೋಲೂರಿ ನಿಂತಿದ್ದರು.
ತಾಹಿರಾ ಮಲಗಿದಲ್ಲಿಯೇ ನಕ್ಕಳು. ಅಜ್ಜಿ ಖುಷಿಯಾಗಿರುವುದು ಕಂಡು ಅವಳಿಗೆ ಸಂತೋಷವಾಗಿತ್ತು.
‘‘ಏಳು ಬೇಗ. ಮುಖ ತೊಳೆದು ಬಾ. ತಿಂಡಿ ತಿನ್ನುವಾ’’ ಅಜ್ಜಿಯ ಮಾತಿನಲ್ಲಿ ಅವಸರವಿತ್ತು.
ತಾಹಿರಾ ಏಳಲಿಲ್ಲ. ಅಜ್ಜಿಯನ್ನು ಸತಾಯಿಸು ವವಳಂತೆ ಮಲಗಿದಲ್ಲಿಯೇ ಹೊರಳಾಡಿದಳು.
 ‘‘ಏಳೂಂತ ಹೇಳಿದ್ದಲ್ವಾ’’ ಅಜ್ಜಿ ಕೈಯಲ್ಲಿದ್ದ ಕೋಲನ್ನು ಎತ್ತಿ ಹುಸಿ ಮುನಿಸು ತೋರಿಸಿದರು. ಅವರ ಕಣ್ಣುಗಳಲ್ಲಿ ತುಂಟತನ ನಗುತ್ತಿತ್ತು.
ತಾಹಿರಾ ಎದ್ದು ಅಜ್ಜಿಯ ಬೆನ್ನ ಹಿಂದೆ ನಿಂತು ‘ಅಜ್ಜೀ’ ಎಂದು ಪ್ರೀತಿಯಿಂದ ಕೂಗುತ್ತಾ ತಬ್ಬಿಕೊಂಡಳು.
‘‘ನಿನ್ನ ಕೊಂಡಾಟ ಸಾಕು. ಎಷ್ಟು ಹೊತ್ತು ಕಾಯಿಸುವುದು ನನ್ನನ್ನು.’’ ಮೊಮ್ಮಗಳ ಪ್ರೀತಿಗೆ ಕರಗಿದ ಅಜ್ಜಿ ವರಾಂಡಕ್ಕೆ ನಡೆದರು. ಅವರನ್ನು ಊಟದ ಮೇಜಿನ ಮುಂದೆ ಕೂರಿಸಿದ ತಾಹಿರಾ ‘‘ನನ್ನಜ್ಜಿಗೆ ಹಸಿವಾಗ್ತದಾ - ಈಗ ಬಂದೆ’’ ಎಂದವಳೇ ಬಚ್ಚಲು ಮನೆಗೆ ನಡೆದಳು.
ಇಬ್ಬರೂ ತಿಂಡಿ ತಿಂದು ಆದ ಮೇಲೆ ತಾಹಿರಾಳ ಕೈ ಹಿಡಿದು ಎಳೆಯುತ್ತಾ ಅವಸರವಸರವಾಗಿ ತನ್ನ ಕೋಣೆಗೆ ನಡೆದ ಅಜ್ಜಿ, ಮೊಮ್ಮಗಳನ್ನು ಹಾಸಿಗೆಯ ಮೇಲೆ ಕುಳ್ಳಿರಿಸಿ, ತಾನೂ ಗೋಡೆಗೊರಗಿ ಕಾಲು ನೀಟಿ ಅವಳೆದುರು ಕುಳಿತರು.
‘‘ಏನಜ್ಜೀ ಇಷ್ಟೊಂದು ಗಡಿಬಿಡಿ’’ ತಾಹಿರಾ ಅಜ್ಜಿಯ ವರ್ತನೆ ಅರ್ಥವಾಗದೆ ಕೇಳಿದಳು.
‘‘ನಾನು ನಿನ್ನೆ ಎಲ್ಲಿಯವರೆಗೆ ಹೇಳಿ ನಿಲ್ಲಿಸಿದ್ದು?’’
‘‘ಓ ಅದಾ, ಅದಕ್ಕಾ ಈಗ ಇಷ್ಟೊಂದು ಅವಸರದಲ್ಲಿ ಎಳ್ಕೊಂಡು ಬಂದದ್ದು.’’
ತಾಹಿರಾಳಿಗೆ ನಗು ಬಂತು.
‘‘ಎಲ್ಲಿವರೆಗೆ ಹೇಳಿದ್ದು ನಿನ್ನೆ?’’ ಅಜ್ಜಿಯ ಕಣ್ಣುಗಳಲ್ಲಿ ಕತೆ ಹೇಳುವ ಆತುರವಿತ್ತು.
‘‘ಆಸ್ಪತ್ರೆಯಲ್ಲಿ ನಿಮ್ಮ ಗಂಡ ತೀರಿಕೊಂಡರು. ಅಲ್ಲಿಯವರೆಗೆ ಹೇಳಿದ್ದೀರಿ.’’
ಅಜ್ಜಿಯ ಮುಖ ಗಂಭೀರವಾಯಿತು. ಅವರು ಕೆಲವು ಹೊತ್ತು ಮೌನವಾಗಿ ಕುಳಿತು ಮತ್ತೆ ಹೇಳತೊಡಗಿದರು.
ಹೌದು ಅವರು ಹೋಗಿ ಬಿಟ್ಟರು. ನನ್ನ ಗಂಡ ನಮ್ಮೆಲ್ಲರನ್ನೂ ಬಿಟ್ಟು ಹೋಗಿ ಬಿಟ್ಟರು...
ನಾವು ಮೂವರು ಸೇರಿ ಹೆಣವನ್ನು ಮನೆಗೆ ತಂದೆವು. ಬಂಧುಗಳು, ಊರವರು ಎಲ್ಲ ನೆರೆದರು. ನಿನ್ನಜ್ಜನ ಒಬ್ಬರೇ ಅಕ್ಕ ಅವರೂ ಬಂದವರು ನನ್ನನ್ನು ಒಂದು ಕೋಣೆಯಲ್ಲಿ ಮೈತುಂಬಾ ಬಟ್ಟೆ ಹೊದಿಸಿ ಕುಳ್ಳಿರಿಸಿದರು. ಕೆಲವು ಮೌಲವಿಗಳು ಬಂದವರು ಹೆಣದ ಮುಂದೆ ಕುಳಿತು ಕುರ್ ಆನ್ ಪಠಿಸತೊಡಗಿದರು. ಮೃತದೇಹವನ್ನು ಸ್ನಾನ ಮಾಡಿಸಿ ಬಿಳಿ ಬಟ್ಟೆ ಹೊದಿಸಿ ತಂದು ಚಾವಡಿಯಲ್ಲಿ ಮಲಗಿಸಿದರು. ಮೊದಲು ಗಂಡಸರೆಲ್ಲ ಬಂದು ಶವದ ದರ್ಶನ ಮಾಡಿ ಆದ ಮೇಲೆ ಹೆಂಗಸರು ಸಾಲು ಸಾಲಾಗಿ ಹೋಗಿ ದರ್ಶನ ಮಾಡಿದರು. ಎಲ್ಲರದ್ದೂ ಆದ ಮೇಲೆ ಕೊನೆಗೆ ನನ್ನನ್ನು ಕರೆದರು. ಒಂದಿಬ್ಬರು ಹೆಂಗಸರು ನನ್ನ ಕೈ ಹಿಡಿದುಕೊಂಡು ಹೋಗಿ ಶವದ ಮುಂದೆ ನಿಲ್ಲಿಸಿದರು. ಕಣ್ಣು ಮುಚ್ಚಿದ್ದ ನನ್ನ ಗಂಡ ಹೊಸ ಬಿಳಿ ಬಟ್ಟೆ ಧರಿಸಿ ನಿದ್ದೆಯಲ್ಲಿದ್ದಂತೆ ಮಲಗಿದ್ದರು. ತಲೆಗೆ ಬಿಳಿ ಮುಂಡಾಸು ಕಟ್ಟಿ ಮದುಮಗನಂತೆ ಕಾಣುತ್ತಿದ್ದರು. ಆದರೆ ಮೂಗಿನ ಹುಳ್ಳೆಗಿಟ್ಟ ಆ ಹತ್ತಿಯಿಂದ ಮುಖ ವಿಕಾರವಾಗಿ ಕಂಡು ನಾನು ನಡುಗಿಬಿಟ್ಟೆ. ಕರ್ಪೂರ, ಲೋಬಾನ, ಊದಿನಕಡ್ಡಿ, ಅತ್ತರ್‌ನ ಸುವಾಸನೆ, ಜೊತೆಗೆ ಮೌಲವಿಗಳೆಲ್ಲ ಸೇರಿ ಹೇಳುವ ಪ್ರಾರ್ಥನೆಯನ್ನು ಕೇಳಿ ನಾನು ಭಯದಿಂದ ‘‘ಯಾ ಅಲ್ಲಾಹ್..’’ ಎಂದು ಚೀರುತ್ತಾ ಕುಸಿದು ಕುಳಿತೆ. ಹೆಂಗಸರೆಲ್ಲ ಸೇರಿ ನನ್ನನ್ನು ಎತ್ತಿ ತಂದು ಮತ್ತೆ ಕೋಣೆಯಲ್ಲಿ ಕುಳ್ಳಿರಿಸಿದರು. ಮುಖ ತೊಳೆದರು. ನೀರು ಕುಡಿಸಿದರು.
‘‘ಲಾ ಇಲಾಹ ಇಲ್ಲಲ್ಲಾಹ್... ಲಾ ಇಲಾಹ ಇಲ್ಲಲ್ಲಾಹ್...’’ ಗಂಡಸರೆಲ್ಲರ ಬಾಯಿಯಿಂದ ಒಮ್ಮೆಲೆ ಮೊಳಗಿತು. ಆ ಕರೆ ಕ್ಷಣಕ್ಕೂ ಜಾಸ್ತಿಯಾಗುತ್ತಾ ಹೋಯಿತು. ನನ್ನ ಗಂಡನನ್ನು ಪಲ್ಲಕ್ಕಿಯಲ್ಲಿ ಮಲಗಿಸಿ ಎಲ್ಲರೂ ಕೂಡಿ ಮೆರವಣಿಗೆಯಲ್ಲಿ ಎತ್ತಿಕೊಂಡು ವೇಗವಾಗಿ ನಡೆದರು.
‘ಲಾಇಲಾಹ ಇಲ್ಲಲ್ಲಾಹ್... ಲಾಇಲಾಹ ಇಲ್ಲಲ್ಲಾಹ್...’’ ನನ್ನ ಎದೆಯಾಳದಲ್ಲಿ ಯಾರೋ ಕೂಗುತ್ತಿರುವುದು ಕೇಳಿ ಆಲಿಸಿದೆ. ಯಾರು... ಯಾರು... ನನ್ನೊಳಗೆ ದೇವರನ್ನು ಕೂಗುತ್ತಿರುವುದು ಯಾರು...? ಹೌದು... ನಾನು... ನಾನೇ ಅದು... ಮೆರವಣಿಗೆಯ ಜನರ ಜೊತೆ ನನ್ನೆದೆಯೂ ದೇವರನ್ನು ಕೂಗುತ್ತಿದೆ.
ಮೆರವಣಿಗೆಯವರ ಧ್ವನಿ ದೂರವಾಗುತ್ತಿದ್ದಂತೆಯೇ ನನ್ನದೆಯ ಧ್ವನಿ ಹತ್ತಿರವಾಗ ತೊಡಗಿತು. ಆ ಧ್ವನಿ ಕಿವಿಯಿಂದ ಸಂಪೂರ್ಣ ಮರೆಯಾದಾಗ ನನ್ನ ದೇಹದ ನರನಾಡಿಗಳಲ್ಲೂ ‘ಲಾಇಲಾಹ ಇಲ್ಲಲ್ಲಾಹ್’ ಮೊಳಗತೊಡಗಿತು. ಭೋರ್ಗರೆಯತೊಡಗಿತು. ನಾನೀಗ ಗಟ್ಟಿಯಾಗತೊಡಗಿದ್ದೆ. ಎಲ್ಲ ದುಃಖ, ಆತಂಕ, ಭಯ, ಅಸಹಾಯಕತೆಯನ್ನು ಕಿತ್ತೊಗೆದು ಗಟ್ಟಿಯಾಗತೊಡಗಿದ್ದೆ. ನನ್ನ ಮುಂದೆ ಈಗ ನನ್ನ ದೇವನು ಬಂದು ನಿಂತಿದ್ದ. ಈಗ ಅವನಲ್ಲದೆ ನನಗೆ ಬೇರೇನೂ ಕಾಣುತ್ತಿರಲಿಲ್ಲ. ಹಾಗೆಯೇ ಅವನನ್ನು ಹೃದಯ ತುಂಬ ತುಂಬಿಕೊಂಡು ಕಣ್ಣು ಮುಚ್ಚಿ ಕುಳಿತುಬಿಟ್ಟಿದ್ದೆ.
ಕೆಲವು ಗಂಟೆಗಳ ಬಳಿಕ ಮನೆಯಲ್ಲಿ ಗಂಡಸರ ಮಾತು ಗದ್ದಲ ಕೇಳಿಸಿತು. ನನ್ನ ಗಂಡನನ್ನು ಅವರೆಲ್ಲ ಕೂಡಿ ಭೂಮಿಯ ಗರ್ಭದಲ್ಲಿ ಮಲಗಿಸಿ ಬಂದಿದ್ದರು. ಒಂದಿಬ್ಬರು ಹೆಂಗಸರು ಬಂದು ನನ್ನನ್ನು ಬಚ್ಚಲು ಮನೆಗೆ ಕರೆದೊಯ್ದು ಸ್ನಾನ ಮಾಡಿಸಿದರು. ಬಿಳಿ ಬಟ್ಟೆ ಉಡಿಸಿ ಮತ್ತೆ ಕರೆತಂದು ಕೋಣೆಯಲ್ಲಿ ಕುಳ್ಳಿರಿಸಿದರು. ಕೋಣೆ ತುಂಬಾ ಲೋಬಾನ, ಊದಿನ ಕಡ್ಡಿಯ ಧೂಮ ಆವರಿಸಿತ್ತು.
‘‘ಈಗ ಮೌಲವಿ ಬರ್ತಾರೆ, ತೌಬಾ ಹೇಳಿ ಕೊಡ್ತಾರೆ, ನೀನು ಹಾಗೆಯೇ ಹೇಳಬೇಕು.’’ ಒಂದಿಬ್ಬರು ಹೆಂಗಸರು ನನ್ನಲ್ಲಿ ಹೇಳಿದರು. ನಾನು ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ.
‘ಮೌಲವಿ ಬಂದರು’ ಯಾರೋ ಹೇಳಿದ್ದು ಕೇಳಿಸಿತು. ಮನೆ ತುಂಬಾ ಮೌನ ಆವರಿಸಿತು. ಹೆಂಗಸರೆಲ್ಲ ತಲೆ ತುಂಬಾ ಮುಸುಕೆಳೆದುಕೊಂಡು ನನ್ನ ಸುತ್ತ ಕುಳಿತರು. ಮೌಲವಿ ಚಾವಡಿಯಲ್ಲಿ ಕುಳಿತು ಗಟ್ಟಿಯಾಗಿ ‘ತೌಬಾ’ದ ಒಂದೊಂದೇ ಶಬ್ದವನ್ನು ಹೇಳತೊಡಗಿದರು.
‘‘................’’
‘‘................’’
ಅವರು ಹೇಳಿ ಕೊಟ್ಟಂತೆ ನಾನು ಮೆಲ್ಲ ಹೇಳತೊಡಗಿದೆ. ನನ್ನ ಜೊತೆ ಹೆಂಗಸರು- ಗಂಡಸರು ಎಲ್ಲ ಒಟ್ಟಾಗಿ ಮೆಲುಧ್ವನಿಯಲ್ಲಿ ಹೇಳತೊಡಗಿದರು. ಅದನ್ನು ಹೇಳುತ್ತಿದ್ದಂತೆ ನನ್ನ ರಕ್ತವೆಲ್ಲ ಕಣ್ಣೀರಾಗಿ ಹರಿಯತೊಡಗಿತ್ತು.
ಞಂಙಲುಡೆ ತಂಬುರಾನೆ (ನಮ್ಮೆಲ್ಲರ ಒಡೆಯನೇ)
    ಞಂಙಲ್ ನಿನ್ನೋಡು(ನಾವು ನಿನ್ನಲ್ಲಿ)
ಅರಿಞಿಟ್ಟ್ ಚೈದ (ತಿಳಿದು ಮಾಡಿದ)
    ದೋಷತ್ತಿನೇ ತೊಟ್ಟುಂ(ಪಾಪಗಳ ಕುರಿತೂ)
    ಅರಿಯಾದೆ ಚೈದ(ತಿಳಿಯದೆ ಮಾಡಿದ)
    ದೋಷತ್ತಿನೇ ತೊಟ್ಟುಂ(ಪಾಪಗಳ ಕುರಿತೂ)
ಮರಂಞಿ ಚೈದ (ಗುಪ್ತವಾಗಿ ಮಾಡಿದ)
    ದೋಷತ್ತಿನೇ ತೊಟ್ಟುಂ(ಪಾಪಗಳ ಕುರಿತೂ)
ಪರಸ್ಯಮಾಯಿ ಚೈದ (ಬಹಿರಂಗವಾಗಿ ಮಾಡಿದ)
 ದೋಷತ್ತಿನೇ ತೊಟ್ಟುಂ (ಪಾಪಗಳ ಕುರಿತೂ)
ಎಲ್ಲಾ (ಎಲ್ಲಾ)
ವನ್‌ದೋಷತ್ತಿನೇ ತೊಟ್ಟುಂ (ಮಹಾ ಪಾಪಗಳ ಕುರಿತೂ)
ಎಲ್ಲಾ (ಎಲ್ಲಾ)
ಚೆರ್ದೋಷತ್ತಿನೇ ತೊಟ್ಟುಂ (ಸಣ್ಣ ಪಾಪಗಳ ಕುರಿತೂ)
ಞಂಙಲ್ ಎಲ್ಲಾವರುಂ (ನಾವೆಲ್ಲರೂ)

ನಿನ್ನೋಡು (ನಿನ್ನಲ್ಲಿ) ಕೇದಿಚ್ಚಿ (ಪಶ್ಚಾತ್ತಾಪದಿಂದ)
ಪೇಡಿಚ್ಚಿ (ಭಯಪಟ್ಟು)
    ಮಡಙುನ್ನು ತಂಬುರಾನೆ.(ಮರಳುತ್ತಿದ್ದೇವೆ ಒಡೆಯನೇ.)
ಞಾಂಙಲುಡೆ ತಂಬುರಾನೆ (ನಮ್ಮೆಲ್ಲರ ಒಡೆಯನೇ)
ಞಂಙಲ್ ಎಲ್ಲಾವರುಂ (ನಾವೆಲ್ಲರೂ)
ಞಂಙಲುಡೆ ತಡಿಯೋಡುಂ (ನಮ್ಮ ಶರೀರದ ಮೂಲಕ)
    ಅನೇಗಂ(ಅನೇಕ)
    
    ಕುಟ್ಟವುಂ(ತಪ್ಪುಗಳನ್ನು) ದುರ್ಮರ್ಯಾದೆಯುಂ(ದುರ್ವರ್ತನೆಗಳನ್ನು)
ಏಟಮೇಟಂ (ಮತ್ತೆ ಮತ್ತೆ)
ಚೈದ್ ನಡನ್ನ (ಮಾಡುತ್ತಾ ನಡೆದ)
ತನೀ (ನಿನ್ನ)
ಅಡಿಯಾರುಗಳಾನ್ (ನಮ್ರ ಸೇವಕರಾಗಿದ್ದೇವೆ)
ತಂಬುರಾನೆ. (ಒಡೆಯನೇ.)
ನಿಂಡೆ (ನಿನ್ನ)
    ರಹ್ಮತ್ತೆನ್ನ(ಕರುಣೆ ಎಂಬ)
ತೌಬಾಯೆನ್ನ (ಕ್ಷಮೆಯ)
ಬಾದುಕ್ಕಲ್ (ಬಾಗಿಲಲ್ಲಿ ನಿಂತು)
ಞಂಙಲ್ ಎಲ್ಲಾವರುಂ (ನಾವೆಲ್ಲರೂ)
ಕೇದಿಚ್ಚಿ (ಪಶ್ಚಾತ್ತಾಪದಿಂದ)
    ಮಡಙುನ್ನು ತಂಬುರಾನೆ.(ಮರಳುತ್ತಿದ್ದೇವೆ ಒಡೆಯನೇ.)
ಎನಿ (ಇನ್ನು)
ಒರಿಕ್ಕಲುಂ (ಒಮ್ಮೆಯೂ)
ಒರು ದೋಷಕೊಳ್ಳೆಯುಂ (ಒಂದು ಪಾಪದ ಹತ್ತಿರವೂ)
ಮಡಙುಗ ಇಲ್ಲೆನ್ನ್ (ಮರಳುವುದಿಲ್ಲವೆಂದು)
ಞಂಙಲ್ (ನಾವು)
ಎಲ್ಲಾವರುಂ (ಎಲ್ಲರೂ)
ಕಲ್ಬುಕೊಂಡು (ಹೃದಯದಿಂದ)
    ನಲ್ಲವನ್ನಂ(ಗಟ್ಟಿಯಾಗಿ)
ಕರುದಿ (ನಿರ್ಧರಿಸಿ)
ಉರಪಿಚ್ಚು (ತೀರ್ಮಾನಿಸಿದೆವು)
ತಂಬುರಾನೆ. (ಒಡೆಯನೇ.)
ನೀ ಞಾಂಙಲುಡೆ (ನೀನು ನಮ್ಮ)
ದೋಷತ್ತಿನೆ (ಪಾಪಗಳನ್ನು)
    ಪೊರುತ್ತು(ಕ್ಷಮಿಸಿ)
ತೌಬಯೇ (ಈ ತೌಬಾವನ್ನು)
    ಕಬೂಲು ಚೆಯ್ಯನಂ(ಸ್ವೀಕರಿಸಬೇಕು)
ತಂಬುರಾನೆ. (ಒಡೆಯನೆ.)
ನಿಂಡೆ (ನಿನ್ನ)
ಕಿರ್ಫಕೊಂಡುಂ (ಕರುಣೆಯಿಂದ)
ನಿಂಡೆ (ನಿನ್ನ)
ಮುಹಮ್ಮದ್ ಬೇದಾಂಬರ್ (ಪ್ರವಾದಿ ಮುಹಮ್ಮದ್)
ಸಲ್ಲಲ್ಲಾಹು (ಸಲ್ಲಲ್ಲಾಹು)
ಅಲೈಹಿವ ಸಲ್ಲಮ್ (ಅಲೈಹಿವ ಸಲ್ಲಮ್)
ತಂಙಲುಡೆ (ಅವರ)
ಬರ್ಕತ್‌ಕೊಂಡು (ಬರ್ಕತ್‌ನಿಂದ)
ಜಹನ್ನಮೆನ್ನ (ಜಹನ್ನಮ ಎಂಬ)
ನರಗತ್ತ್‌ನೆ ತೊಟ್ಟು (ನರಕದಿಂದ)
    ಞಂಙಲೆ(ನಮ್ಮೆಲ್ಲರನ್ನೂ)
ಸಲಾಮತ್ತಾಕನಂ (ಪಾರು ಮಾಡು)
ತಂಬುರಾನೆ. (ಒಡೆಯನೇ.)
    ................................
    ................................
ಮೌಲವಿ ತೌಬಾ ಹೇಳಿ ಮುಗಿಸಿದಾಗ ನಾನು ಎರಡು ಕೈಗಳಿಂದಲೂ ಮುಖ ಮುಚ್ಚಿ ಜೋರಾಗಿ ಅಳತೊಡಗಿದ್ದೆ. ಆನಂತರ ಮನೆಯಿಂದ ಒಬ್ಬೊಬ್ಬರಾಗಿ ಚದುರತೊಡಗಿದರು. ಕೊನೆಗೆ ಮನೆಯಲ್ಲಿ ಉಳಿದದ್ದು ನನ್ನ ತಂದೆ, ತಾಯಿ, ತಂಗಿ ಮತ್ತು ನಿನ್ನ ಅಜ್ಜ, ಅವರ ಅಕ್ಕ ಮಾತ್ರ. ಅಮ್ಮ ನನ್ನನ್ನು ಕೋಣೆಯಿಂದ ಹೊರಗೆ ಬಾರದಂತೆ ಎಚ್ಚರಿಸಿದ್ದರು. ಕೋಣೆಯ ಕಿಟಕಿ-ಬಾಗಿಲುಗಳನ್ನೆಲ್ಲ ಮುಚ್ಚಿ ಬಿಟ್ಟಿದ್ದರು. ಕೋಣೆ ಯಲ್ಲಿ ನಮಾಝ್ ಮಾಡುವ ಚಾಪೆಯನ್ನು ಬಿಡಿಸಿಟ್ಟಿ ದ್ದರು. ಅದರ ಮಧ್ಯೆ ಜಪಸರ ಇಟ್ಟಿದ್ದರು.
ರವಿವಾರದ ಸಂಚಿಕೆಯಲ್ಲಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News