ಆರೆಸ್ಸೆಸ್ ವಿರುದ್ಧ ಹೋರಾಟದಲ್ಲಿ ಸಂತೋಷವಿದೆ: ರಾಹುಲ್ ಗಾಂಧಿ
ಹೊಸದಿಲ್ಲಿ,ಸೆಪ್ಟಂಬರ್ 29: ಅಸ್ಸಾಂನ ದೇವಸ್ಥಾನವೊಂದರ ಪ್ರವೇಶಕ್ಕೆ ಸಂಬಂಧಿಸಿ ತನ್ನ ವಿರುದ್ಧ ಆರೆಸ್ಸೆಸ್ ಹಾಕಿರುವ ಕೇಸಿನ ವಾದ ನಡೆಯುವಾಗ ಕೋರ್ಟಿನಲ್ಲಿ ಹಾಜರಿದ್ದ ರಾಹುಲ್ ಗಾಂಧಿ "ಆರೆಸ್ಸೆಸ್ ತನ್ನ ವಿರುದ್ಧ ಎಷ್ಟು ಕೇಸು ಕೊಡಬಹುದು. ಅವರ ವಿರುದ್ಧ ಹೋರಾಡಲು ಸಂತೋಷವಿದೆ" ಎಂದು ಹೇಳಿದ್ದಾರೆಂದು ವರದಿಯಾಗಿದೆ.
ಅಸ್ಸಾಮ್‌ನಲ್ಲಿ 2015 ಡಿಸೆಂಬರ್‌ನಲ್ಲಿ ರೋಡ್ ಶೋ ನಡೆಸುತ್ತಿದ್ದಾಗ ರಾಹುಲ್ ಗಾಂಧಿ ಅಲ್ಲಿನ ಬಾರ್ಪತೆ ದೇವಾಲಯ ಪ್ರವೇಶಿಸಿದ್ದರು. ಆದರೆ ಮಹಿಳಾ ಭಕ್ತರ ತಂಡವೊಂದು ದೇವಸ್ಥಾನ ಪ್ರವೇಶಿಸದಂತೆ ತಡೆದಿದ್ದರು.
ಘಟನೆಯಿಂದ ಬೇಸರಗೊಂಡಿದ್ದ ರಾಹುಲ್ ಇದರ ಹಿಂದೆ ಆರೆಸ್ಸೆಸ್‌ನ ಹಸ್ತವಿದೆ ಎಂದು ಅಪಾದಿಸಿದ್ದರು. ಮಹಿಳೆಯರನ್ನು ಮುಂದೆ ನಿಲ್ಲಿಸಿ ದೇವಳಕ್ಕೆ ಹೋಗದಂತೆ ತಡೆದ ಬಿಜೆಪಿ,ಆರೆಸ್ಸೆಸ್ ಕಾರ್ಯಕರ್ತರ ಕ್ರಮ ಲಜ್ಜಾಸ್ಪದವಾಗಿದೆ ಎಂದು ಅವರು ಹೇಳಿದ್ದರು. ಆರೆಸ್ಸೆಸ್ ರಾಹುಲ್ ವಿರುದ್ಧ ಮಾನಹಾನಿ ಕೇಸು ಹಾಕಿತ್ತು. ಇದರ ವಿಚಾರಣೆ ನಡೆಯುವ ವೇಳೆ ರಾಹುಲ್ ಕೋರ್ಟಿನಲ್ಲಿ ಸ್ವಯಂ ಹಾಜರಿದ್ದರು.
ದೇವಳ ಪ್ರವೇಶಿಸಿದಂತೆ ತಡೆಯಲಾಗಿದೆ ಎಂಬ ರಾಹುಲ್ ಗಾಂಧಿ ವಾದವನ್ನು ದೇವಳ ಅಧಿಕಾರಿಗಳು ಮತ್ತು ಬಿಜೆಪಿ ನಿರಾಕರಿಸಿದೆ ಎಂದು ವರದಿಯಾಗಿದೆ.