×
Ad

ಭಾರತಕ್ಕೆ ಅಮೆರಿಕಾ ನೀಡಿದ ಸಲಹೆ ಏನು ಗೊತ್ತೆ ?

Update: 2016-09-29 19:40 IST

ಹೊಸದಿಲ್ಲಿ,ಸೆ.29: ಪಾಕಿಸ್ತಾನವನ್ನು ಒಂಟಿಯಾಗಿಸಲು ರಾಜತಾಂತ್ರಿಕ ಮಾರ್ಗಗಳನ್ನು ಭಾರತವು ಪರಿಶೀಲಿಸುತ್ತಿರುವ ನಡುವೆಯೇ ಅಮೆರಿಕವು, ಪಾಕಿಸ್ತಾನದೊಂದಿಗಿನ ಸ್ಥಿತಿಯನ್ನು ಉದ್ವಿಗ್ನಗೊಳಿಸದಂತೆ ಭಾರತವನ್ನು ಕೇಳಿಕೊಂಡಿದೆ.

ಈ ವಿಷಯವಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಅವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರೊಡನೆ ಕಳೆದೆರಡು ದಿನಗಳಲ್ಲಿ ಎರಡು ಬಾರಿ ಮಾತುಕತೆಗಳನ್ನು ನಡೆಸಿದ್ದಾರೆ. ವಿಶ್ವಸಂಸ್ಥೆಯ ಮಹಾಧಿವೇಶನಕ್ಕಾಗಿ ನ್ಯೂಯಾರ್ಕ್‌ನಲ್ಲಿರುವ ಸುಷ್ಮಾ ಸೋಮವಾರ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಕಟುವಾದ ಭಾಷಣವನ್ನು ಮಾಡಿದ್ದರು.

ಉರಿ ಭಯೋತ್ಪಾದಕ ದಾಳಿಯ ಬಳಿಕ ಅಮೆರಿಕವು ಇದೇ ಮೊದಲ ಬಾರಿಗೆ ಉನ್ನತ ರಾಜಕೀಯ ಮಟ್ಟದಲ್ಲಿ ಭಾರತದ ನಾಯಕತ್ವದೊಡನೆ ಮಾತುಕತೆ ನಡೆಸಿದೆ ಎಂದು ಮೂಲಗಳು ತಿಳಿಸಿದವು.

ಅಮೆರಿಕದಲ್ಲಿ ಈಗ ಚುನಾವಣೆಯ ಭರಾಟೆಯಿದ್ದರೂ ವಿದೇಶಾಂಗ ಇಲಾಖೆಯು ಭಾರತೀಯ ಉಪಖಂಡದಲ್ಲಿನ ಬೆಳವಣಿಗೆಗಳ ಮೇಲೆ ನಿಗಾಯಿರಿಸಿದೆ ಎಂದು ಅವು ಹೇಳಿದವು.

ಸಿಂಧೂ ಜಲ ಒಪ್ಪಂದದ ಪುನರ್‌ಪರಿಶೀಲನೆ,ಸಾರ್ಕ್ ಶೃಂಗಸಭೆಗೆ ಬಹಿಷ್ಕಾರ ಸೇರಿದಂತೆ ಭಾರತ ಮತ್ತು ಪಾಕ್ ನಡುವೆ ಕಳೆದೆರಡು ದಿನಗಳಿಂದ ಕಾವೇರಿದ ಸ್ಥಿತಿ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಮಾತುಕತೆಗಳು ನಡೆದಿವೆ ಎಂದೂ ಅವು ತಿಳಿಸಿದವು.

ಇದೇ ವೇಳೆ ಉರಿ ದಾಳಿಯ ಬಳಿಕ ಭಾರತವು ಬಹಳಷ್ಟು ಸಂಯಮವನ್ನು ಕಾಯ್ದುಕೊಂಡಿರುವುದನ್ನು ಅಮೆರಿಕವು ಮೆಚ್ಚಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News