ಉಮಾಭಾರತಿಗೆ ರಿಲೀಫ್

Update: 2016-09-30 14:55 GMT

ಭೋಪಾಲ್, ಸೆ.30: ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ದಾಖಲಿಸಿರುವ ಮಾನನಷ್ಟ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದುದಕ್ಕಾಗಿ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿಯವರ ವಿರುದ್ಧ ಕೆಳ ನ್ಯಾಯಾಲಯವೊಂದು ಹೊರಡಿಸಿದ್ದ ಬಂಧನಾದೇಶವನ್ನು ಭೋಪಾಲ್‌ನ ಜಿಲ್ಲಾ ನ್ಯಾಯಾಲಯವಿಂದು ರದ್ದುಪಡಿಸಿದೆ.

ಉಮಾಭಾರತಿಯವರ ಹೇಳಿಕೆಯನ್ನು ವಕೀಲರೊಬ್ಬರ ಮೂಲಕ ದಾಖಲಿಸಿಕೊಳ್ಳಬಹುದು. ನ್ಯಾಯಾಲಯದಲ್ಲಿ ಅವರ ಉಪಸ್ಥಿತಿ ಅಗತ್ಯವಿಲ್ಲ .ಪ್ರಕರಣವು ಗಂಭೀರ ಸ್ವರೂಪದ್ದಲ್ಲವೆಂಬ ವಕೀಲ ಹರೀಶ್ ಮೆಹ್ತಾರ ವಾದವನ್ನಾಲಿಸಿದ ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ವಾರಂಟನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಮ್‌ಕುಮಾರ್ ಚೌಬೆ ರದ್ದುಗೊಳಿಸಿದರು.

ಈ 13 ವರ್ಷ ಹಳೆಯ ಪ್ರಕರಣದ ಸಂಬಂಧ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಭುಭಸ್ಕರ್ ಯಾದವ್ ಗುರುವಾರ ಮುಂಜಾನೆ ಉಮಾಭಾರತಿಯವರ ವಿರುದ್ಧ ವಾರಂಟ್ ಹೊರಡಿಸಿದ್ದು, ಅದನ್ನು ಜಾರಿಗೊಳಿಸಿ ಅವರನ್ನು ಬಂಧಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News