ಕಾವೇರಿ ನೀರು ಹಂಚಿಕೆ ವಿವಾದ ;ಕರ್ನಾಟಕ ಪರ ವಕೀಲ ನಾರಿಮನ್ ವಾದ ಮುಂದುವರಿಕೆ
ಹೊಸದಿಲ್ಲಿ, ಸೆ.30: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ಹಿರಿಯ ವಕೀಲರಾದ ಫಾಲಿ ಎಸ್ ನಾರಿಮನ್ ಅವರು ರಾಜ್ಯದ ಪರ ವಾದವನ್ನು ಸುಪ್ರೀಂ ಕೊರ್ಟ್‌ನಲ್ಲಿ ಮುಂದವರಿಸಲಿದ್ದಾರೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ಕಾನೂನು ಸಚಿವ ಟಿ.ಬಿ. ಜಯಚಂದ್ರ ಮತ್ತು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಇಂದು ನಾರಿಮನ್‌ರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ರಾಜ್ಯ ಸರಕಾರಕ್ಕೆ ನಾರಿಮನ್ ಕೆಲವು ಸಲಹೆ ನೀಡಿದ್ದಾರೆ. ಆ ಸಲಹೆಗಳನ್ನು ನಾಳೆ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಟಿಬಿ ಜಯಚಂದ್ರ ಮಾಹಿತಿ ನೀಡಿದರು.
ಇಂದು ನಡೆದ ವಿಚಾರಣೆಯ ವೇಳೆ ನೀರು ಬಿಡದಿರುವ ರಾಜ್ಯ ಸರಕಾರದ ನಿಲುವಿನ ವಿರುದ್ಧ ಕಿಡಿ ಕಿಡಿಯಾಗಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನನ ದ್ವಿಸದಸ್ಯ ವಿಭಾಗೀಯ ಪೀಠ ಅಕ್ಟೋಬರ್ 1ರಿಂದ 6ರ ತನಕ 36 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕ ಸರಕಾರಕ್ಕೆ ಆದೇಶ ನೀಡಿತ್ತು.. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಿದೆ.
ನೀರು ಬಿಡದ ಕರ್ನಾಟಕದ ನಿಲುವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಎರಡೂ ರಾಜ್ಯಗಳು ನ್ಯಾಯಾಲಯದ ಆದೇಶ ಪಾಲಿಸಲೇಬೇಕು. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವೂ ಒಂದು. ದೇಶದ ನ್ಯಾಯಾಲಯದ ಘನತೆಗೆ ಕರ್ನಾಟಕದಿಂದ ಧಕ್ಕೆ ಉಂಟಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ಸರಕಾರ ಈ ಸಂದರ್ಭದಲ್ಲಿ ಒಪ್ಪಿಕೊಂಡಿದೆ. ಮೂರು ದಿನದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ನಾಳೆ ಸಂಜೆ 4ಗಂಟೆಯೊಳಗೆ ಮಂಡಳಿಯ ಪ್ರತಿನಿಧಿಗಳ ಮಾಹಿತಿ ನಮಗೆ ಕೊಡಿ ಎಂದು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ರಾಜ್ಯದ ಪರ ವಕೀಲರಾದ ಫಾಲಿ ಎಸ್ ನಾರಿಮನ್ ಅವರು ಸುಪ್ರೀಂ ಕೋರ್ಟ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಟಿಪ್ಪಣಿ ಸಲ್ಲಿಸಿದರು. ಆದರೆ ವಾದ ಮಂಡಿಸಲಿಲ್ಲ. ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ನ ಆದೇಶವನ್ನು ಪಾಲಿದ ಹಿನ್ನೆಲೆಯಲ್ಲಿ ನಾರಿಮನ್ ವಾದಿಸಲಿಲ್ಲ ಎಂದು ತಿಳಿದು ಬಂದಿದೆ.