ಇರಾನ್ ಪ್ರಸ್ತಾವನೆಗೆ ಭಾರತದ ಒಪ್ಪಿಗೆ ನಿರೀಕ್ಷೆ
ಹೊಸದಿಲ್ಲಿ, ಸೆ.30: ಆಯಕಟ್ಟಿನ ಚಬಹಾರ್ ಬಂದರಿನಲ್ಲಿರುವ ವಿಮಾನ ನಿಲ್ದಾಣವನ್ನು ಅಭಿವೃದ್ಧಿಗೊಳಿಸಲು ಇರಾನ್ ನೀಡಿರುವ ಪ್ರಸ್ತಾವನೆಯನ್ನು ಭಾರತ ಪರಿಶೀಲಿಸಲಿದೆ. ಬಂದರಿಗೆ ರೈಲು- ರಸ್ತೆ ಸಂಪರ್ಕ ಕಲ್ಪಿಸುವುದು ಸೇರಿದಂತೆ ಸಮಗ್ರ ಮೂಲಭೂತ ಸೌಕರ್ಯ ಅಭಿವೃದ್ಧಿ ಉಪಕ್ರಮದ ಅಂಗವಾಗಿ ಇರಾನ್ ಈ ಪ್ರಸ್ತಾವನೆ ನೀಡಿದೆ.
ಚಬಹಾರ್ ಬಂದರಿನಲ್ಲಿ ಈಗಾಗಲೇ ಒಂದು ವಿಮಾನ ನಿಲ್ದಾಣವಿದೆ. ಇದನ್ನು ಅಭಿವೃದ್ಧಿಗೊಳಿಸಲು ಮತ್ತು ಆಧುನೀಕರಣಗೊಳಿಸಲು ಭಾರತಕ್ಕೆ ಆಸಕ್ತಿ ಇದೆಯೇ ಎಂದು ಭಾರತಕ್ಕೆ ಭೇಟಿ ನೀಡಿರುವ ಇರಾನ್‌ನ ನಿಯೋಗ ಕೇಳಿದೆ. ಇರಾನ್‌ನ ರಸ್ತೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಡಾ. ಅಬ್ಬಾಸ್ ಅಖೌಂಡಿ, ಭಾರತದಲ್ಲಿರುವ ಇರಾನ್ ರಾಯಭಾರಿ ಜಿ.ಅನ್ಸಾರಿ ಮತ್ತು ಸಹಾಯಕ ಸಚಿವ ಮುಹಮ್ಮದ್ ಸಯೀದ್ ನೆಜಾದ್ ಮತ್ತು ಇತರ ಅಧಿಕಾರಿಗಳನ್ನು ಒಳಗೊಂಡ ನಿಯೋಗವು ಸಾರಿಗೆ ಸಚಿವ ನಿತಿನ್ ಗಡ್ಕರಿ ನೇತೃತ್ವದ ಭಾರತೀಯ ನಿಯೋಗದ ಜೊತೆ ಈ ನಿಟ್ಟಿನಲ್ಲಿ ಮಾತುಕತೆ ನಡೆಸಿತು. ಇರಾನಿನ ದಕ್ಷಿಣ ತೀರದಲ್ಲಿರುವ ಚಬಹಾರ್ ಬಂದರು ಸಿಸ್ತಾನ್- ಬಲೂಚಿಸ್ತಾನ್ ಪ್ರದೇಶದಲ್ಲಿದೆ. ಪರ್ಶಿಯನ್ ಗಲ್ಫ್ ನ ಹೊರಭಾಗದಲ್ಲಿರುವ ಈ ಆಯಕಟ್ಟಿನ ಬಂದರನ್ನು ಭಾರತದ ಪಶ್ಚಿಮ ತೀರದ ಮೂಲಕ ಪಾಕಿಸ್ತಾನವನ್ನು ಸುತ್ತುಬಳಸಿ ಸುಲಭವಾಗಿ ಸಂಪರ್ಕಿಸಬಹುದಾಗಿದೆ.