ಅಮ್ಮನ ಅನಾರೋಗ್ಯ: ಉಹಾಪೋಹಗಳದ್ದೇ ಕಾರುಬಾರು ...!

Update: 2016-10-01 10:29 GMT

ಚೆನ್ನೈ, ಅ.1:ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿಯನ್ನು ತಮಿಳುನಾಡು ಸರಕಾರ ಮುಚ್ಚಿಟ್ಟಿರುವ ಹಿನ್ನೆಲೆಯಲ್ಲಿ,  ಅವರ ಅನಾರೋಗ್ಯ ಬಗ್ಗೆ ಉಹಾಪೋಹಗಳದ್ದೇ ಕಾರುಬಾರು ಕಂಡುಬಂದಿದೆ.
 ಅವರು ಜ್ವರ ಮತ್ತು ಡಿಹೈಡ್ರೇಶನ್‌‌( ನಿರ್ಜಲಿಕರಣ) ಸಮಸ್ಯೆಯಿಂದ ಬಳಲುತ್ತಿದ್ದ ಸೆ.22ರಂದು ಅನಾರೋಗ್ಯ ತೊಂದರೆಯಿಂದಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.ಜಯಲಲಿತ ಅವರಿಗೆ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ನಡುವೆ ಅವರನ್ನು ಸಿಂಗಾಪುರಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗುವುದು ಎಂದು ಹೇಳಲಾಗಿತ್ತು. ಆದರೆ ಬಳಿಕ ಮುಖ್ಯ ಮಂತ್ರಿ ಅವರ ಆಪ್ತರು ಸಿಂಗಾಪುರದಲ್ಲಿ ಚಿಕಿತ್ಸೆ ನೀಡುವುದನ್ನು ನಿರಾಕರಿಸಿದ್ದರು. ಇದೀಗ ಲಂಡನ್‌ನಿಂದ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಲು ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.ಜಯಲಲಿತಾ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ.ಆದರೆ ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯೊಳಗೆ ಯಾರನ್ನೂ ಬಿಡಲಾಗುತ್ತಿಲ್ಲ. ಆಸ್ಪತ್ರೆಯ ಸುತ್ತ ಪೊಲೀಸರ ಸರ್ಪಗಾವಲು ಕಂಡು ಬಂದಿದೆ.

ಮುಖ್ಯ ಮಂತ್ರಿ ಜಯಲಲಿತಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಹಲವು ತಿಂಗಳುಗಳೇ ಉರುಳಿವೆ. ಅವರ ಆರೋಗ್ಯದ ಸ್ಥಿತಿ ಹದಗೆಟ್ಟಿದೆ. ಆದರೆ ಅವರ ಆರೋಗ್ಯ ಸ್ಥಿತಿ ಹೇಗಿದೆ ? ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ರಾಜ್ಯ ಸರಕಾರವಾಗಲಿ, ಅಪೋಲೋ ಆಸ್ಪತ್ರೆಯಾಗಲಿ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೆ ಅಪೋಲೋ ಆಸ್ಪತ್ರೆ ಪ್ರಕಟಣೆ ನೀಡಿತ್ತು. ಬಳಿಕ ಯಾವುದೇ ಹೇಳಿಕೆ ನೀಡಿಲ್ಲ.

ವರದಿಗಳ ಪ್ರಕಾರ ಬ್ರಿಟಿಷ್ ವೈದ್ಯ ರಿಚರ್ಡ್ ಜಾನ್ ಬೇಲೆ ಶುಕ್ರವಾರ ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ಆರೋಗ್ಯವನ್ನು ತಪಾಸಣೆ ಮಾಡಿದ್ದಾರೆ. ಜಯಲಲಿತಾ ಅವರ ಆರೋಗ್ಯದ ಬಗ್ಗೆ ಹಲವಾರು ವದಂತಿಗಳು ಕೇಳಿ ಬರುತ್ತಿದೆ. ಅಧಿಕೃತ ಹೇಳಿಕೆಗಾಗಿ ಎಲ್ಲರೂ  ಕಾಯುತ್ತಿದ್ದಾರೆ. 
ಸಾಮಾಜಿಕ ಜಾಲಾ ತಾಣಗಳಲ್ಲಿ ಅವರ ಅರೋಗ್ಯ ಸ್ಥಿತಿಯ ಬಗ್ಗೆ ವಿಭಿನ್ನ ಸುದ್ದಿಗಳು ಹರಿದಾಡುತ್ತಿದೆ. ವಾರಾಂತ್ಯದಲ್ಲಿ ಬೆಂಗಳೂರಿನ ಜನರು ತಮಿಳುನಾಡು ಕಡೆಗೆ ಪ್ರವಾಸ ಕೈಗೊಳ್ಳುತ್ತಾರೆ. ಆದರೆ ಈ ವಾರ ಪರಿಸ್ಥಿತಿ ಚೆನ್ನಾಗಿಲ್ಲ. ಕನ್ನಡಿಗರು  ಯಾರೂ ತಮಿಳುನಾಡು ಕಡೆಗೆ ಸುಳಿಯದಂತೆ  ಸಾಮಾಜಿಕ ಜಾಲಾ ತಾಣಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ಕಾವೇರಿ ನೀರು ಹಂಚಿಕೆ ವಿವಾದವೂ ಇದಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ಅ.1ರಿಂದ ಆರು ದಿನಗಳ ಕಾಲ ಮುವತ್ತಾರು ಸಾವಿರ ಕ್ಯೂಸೆಕ್ಸ್‌  ನೀರು ಬಿಡುವಂತೆ ಸುಪೀಂ ಕೋರ್ಟ್‌  ಶುಕ್ರವಾರ ಆದೇಶ ನೀಡಿತ್ತು. ಆದರೆ ಕರ್ನಾಟಕ ಸರಕಾರ ನೀರು ಬಿಡದಿರುವ ನಿರ್ಧಾರಕ್ಕೆ ಅಂಟಿಕೊಂಡಿದೆ. ಇದು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.ಈ ಕಾರಣದಿಂದಾಗಿ ಉಭಯ ರಾಜ್ಯಗಳಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News