ಭಾರತೀಯ ಚಾನೆಲ್‌ಗಳ ಪ್ರಸಾರ ನಿರ್ಬಂಧಿಸಿದ ಪಾಕ್
ಇಸ್ಲಾಮಾಬಾದ್,ಅ.1: ಪಾಕಿಸ್ತಾನದಾದ್ಯಂತ ಅಕ್ಟೋಬರ್ 15ರಿಂದ ಯಾವುದೇ ಭಾರತೀಯ ಟಿವಿ ಚಾನೆಲ್‌ಗಳ ಪ್ರದರ್ಶನವನ್ನು ನಿಷೇಧಿಸಲಾಗಿದೆಯೆಂದು ಪಾಕ್ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (ಪಿಇಎಂಆರ್‌ಎ)ವು ತಿಳಿಸಿದೆ.
ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಗಡಿನಿಯಂತ್ರಣ ರೇಖೆಯ ಸಮೀಪದಲ್ಲಿರುವ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿಗಳನ್ನು ನಡೆಸಿದ ಘಟನೆಯ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿರುವ ಬೆನ್ನಲ್ಲೇ ಪಿಇಎಂಆರ್‌ಎ ಈ ಕ್ರಮಕ್ಕೆ ಮುಂದಾಗಿದೆ. ಈ ಆದೇಶವನ್ನು ಉಲ್ಲಂಘಿಸಿದ ಕೇಬಲ್ ನಿರ್ವಾಹಕರ ವಿರುದ್ಧ ಕಠಿಣ ಕ್ರಮವನ್ನು ಕೆಗೊಳ್ಳಲಾಗುವುದೆಂದು ಅದು ಎಚ್ಚರಿಕೆ ನೀಡಿದೆ.
ಭಾರತದಲ್ಲಿ ಪಾಕಿಸ್ತಾನಿ ಕಾರ್ಯಕ್ರಮಗಳನ್ನು ನಿಷೇಧಿಲಾಗಿದೆ ಹಾಗೂ ಭಾರತೀಯ ಕಲಾವಿದರು ಇಸ್ಲಾಮಾಬಾದ್ ಬಗ್ಗೆ ನಕಾರ ಸಂದೇಶಗಳನ್ನು ನೀಡುತ್ತಿರುವ ಪರಿಣಾಮವಾಗಿ ಪಾಕ್ ನಾಗರಿಕರು ಭಾರತೀಯ ಚಾನೆಲ್‌ಗಳ ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆಂದು ಪಿಇಎಂಆರ್‌ಎ ಅಪಾದಿಸಿದೆ.
ಅಲ್ಲದೆ ಸ್ಥಳೀಯ ಚಾನೆಲ್‌ಗಳು ಅನುಮತಿಯಿಲ್ಲದೆ ಭಾರತೀಯ ಟಾಕ್ ಶೋ, ರಿಯಾಲಿಟಿ ಕಾರ್ಯಕ್ರಮಗಳನ್ನು ಹಾಗೂ ನಾಟಕಗಳ ಪ್ರಸಾರ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ಅದು ಆದೇಶಿಸಿದೆ.