ಬಿಡಿಸಲಾಗದ ಆ ಮನೆಯ ಬಂಧ

Update: 2016-10-01 18:15 GMT

ಧಾರವಾಹಿ- 30

ಹೀಗೆ ಮೂರು ದಿನ ಕಳೆಯಿತು. ಆ ಮೂರು ದಿನವೂ ನನಗೆ ಊಟ, ತಿಂಡಿ ಎಲ್ಲ ಕೋಣೆಗೆ ಬರುತ್ತಿತ್ತು. ಇಡೀ ಮನೆ ತುಂಬಾ ಜಿಂಕೆಯಂತೆ ಓಡಾಡುತ್ತಿದ್ದ ನಾನಾಗ ಕೈದಿಯಂತಾಗಿ ಬಿಟ್ಟಿದ್ದೆ. ನನ್ನ ಭಾವನೆಗಳೆಲ್ಲ ಸತ್ತು ಹೋಗಿತ್ತು.

ಅಂದು ನನ್ನ ಗಂಡನ ಮೂರನೆ ದಿನದ ಕಾರ್ಯ. ಮತ್ತೆ ಮನೆಯಲ್ಲಿ ಬಂಧುಗಳು, ಊರವರು ಎಲ್ಲ ನೆರೆದಿದ್ದರು. ಎಲ್ಲರೂ ಬರುವಾಗ ಕಡ್ಲೆ ಮಿಠಾಯಿ, ಮಾಲ್ಪುರಿ, ಲಡ್ಡು, ಜಿಲೇಬಿ, ಕಲ್ಲುಸಕ್ಕರೆ, ಓಲೆ ಬೆಲ್ಲ, ಖರ್ಜೂರ ಹೀಗೆ ಒಬ್ಬೊಬ್ಬರು ಒಂದೊಂದನ್ನು ತಂದಿದ್ದರು. ಕೆಲವರು ಕಬ್ಬು, ಹಣ್ಣು ಹಂಪಲು, ಮನೆಯಲ್ಲಿ ಮಾಡಿದ ಪತ್ತಿರ್, ನೈಯಪ್ಪ, ಗುಳಿಯಪ್ಪ, ಕಲ್ತಪ್ಪ ಏನಾದರೊಂದು ಅಪ್ಪಮಾಡಿ ತಂದಿದ್ದರು.

ಚಾವಡಿಯಲ್ಲಿ ಚಾಪೆ ಹಾಕಿ ಅದಕ್ಕೆ ಬಿಳಿ ಬಟ್ಟೆ ಹಾಸಿ ಎಲ್ಲರೂ ತಂದದ್ದನ್ನು ಮಿಶ್ರ ಮಾಡಿ ಅದರಲ್ಲಿ ಗುಡ್ಡೆ ಹಾಕಿದರು. ಜೊತೆಗೆ ಎಳ್ಳು, ಬೆಲ್ಲ, ಕಾಯಿ ತುರಿ ಹಾಕಿ ಕಲಸಿದ ಅವಲಕ್ಕಿ - ಅರಳನ್ನು ರಾಶಿ ಹಾಕಿದರು.

ಮೌಲವಿ ಬಂದರು ಯಾಸೀನ್ ಓದಿದರು. ದುಆ ಮಾಡಿದರು. ಮತ್ತೆ ಎಲ್ಲರಿಗೂ ‘ತೌಬಾ’ ಹೇಳಿ ಕೊಟ್ಟರು. ಆನಂತರ ಚಾವಡಿಯಲ್ಲಿ ರಾಶಿ ಹಾಕಲಾಗಿದ್ದ ತಿಂಡಿ, ಹಣ್ಣು ಹಂಪಲುಗಳನ್ನು ಎಲ್ಲರಿಗೂ ತಿನ್ನಲು ಕೊಟ್ಟರು. ಮತ್ತೆ ಪೊಟ್ಟಣ ಮಾಡಿ ಬಂದವರೆಲ್ಲರಿಗೂ ಮನೆಗೊಯ್ಯಲು ಕೊಡಲಾಯಿತು. ಉಳಿದದ್ದನ್ನು ನೆರೆಕರೆ - ಊರಿನ ಮನೆಗಳಿಗೆಲ್ಲ ಹಂಚಲಾಯಿತು.

ಅಂದು ಎಲ್ಲರೂ ನನಗೆ ಸಾಂತ್ವನ ಹೇಳುವವರೇ. ಸಂತಾಪ ಸೂಚಿಸುವವರೇ. ಅನುಕಂಪದ ಮಾತನಾಡುವವರೇ.

ಅಂದು ರಾತ್ರಿ, ಅಮ್ಮ ಕೋಣೆಗೆ ಬಂದು ನನ್ನ ಬಟ್ಟೆಗಳನ್ನೆಲ್ಲ ಚೀಲಕ್ಕೆ ತುಂಬಿಸುವುದು ಕಾಣಿಸಿತು.

‘‘ಯಾಕಮ್ಮಾ, ಅದನ್ನೆಲ್ಲ ಚೀಲಕ್ಕೆ ತುಂಬಿಸುತ್ತಾ ಇದ್ದಿಯಾ?’’ ಕೇಳಿದೆ.

‘‘ನಾಳೆ ಬೆಳಗ್ಗೆ ನಾವು ಹೋಗುವುದು’’

‘‘ಎಲ್ಲಿಗೆ?’’

‘‘ನಮ್ಮ ಮನೆಗೆ’’

‘‘ಅದಕ್ಕೆ ನನ್ನ ಸೀರೆ, ಬಟ್ಟೆಗಳನ್ನೆಲ್ಲಾ ಯಾಕೆ ಚೀಲಕ್ಕೆ ಹಾಕ್ತಾ ಇದ್ದಿಯಾ?’’

‘‘ನೀನೂ ನಮ್ಮ ಜೊತೆ ಬರುತ್ತೀ.’’

‘‘ಯಾಕೆ?’’

‘‘ಗಂಡ ತೀರಿ ಹೋದ ಮೇಲೆ ಇನ್ನು ನೀನು ಈ ಮನೆಯಲ್ಲಿ ಇರಲಿಕ್ಕೆ ಆಗುವುದಿಲ್ಲ. ಈಗ ಇದು ನಿನ್ನ ಮನೆಯಲ್ಲ. ಈ ಮನೆದ್ದು ಋಣ ಮುಗಿಯಿತು. ಇನ್ನು ನೀನು ಇರಬೇಕಾದ್ದು ನಮ್ಮ ಮನೆಯಲ್ಲಿ.’’

‘‘ಇಲ್ಲಮ್ಮಾ... ನಾನು ಬರುವುದಿಲ್ಲ.’’

‘‘ಏನು ಮಾತಾಡ್ತಾ ಇದ್ದಿಯಾ ನೀನು!’’ ತಾಯಿಗೆ ಆಶ್ಚರ್ಯವಾಗಿತ್ತು.

‘‘ಹೌದಮ್ಮಾ, ನಾನು ಬರುವುದಿಲ್ಲ. ಇದು ನನ್ನ ಮನೆ. ನಾನು ಇಲ್ಲೇ ಇರುವುದು.’’

‘‘ಹುಚ್ಚರಂತಾಡಬೇಡ. ನೀನು ಗಂಡ ಸತ್ತ ಹೆಣ್ಣು’’ ಅಮ್ಮ ನನ್ನ ಬಟ್ಟೆಗಳನ್ನು ಚೀಲಕ್ಕೆ ತುಂಬಿಸುತ್ತಲೇ ಹೇಳಿದರು.

‘‘ಇಲ್ಲಮ್ಮಾ, ಯಾರು ಹೇಳಿದರೂ ನಾನು ಬರುವುದಿಲ್ಲ. ನೀನು ನನ್ನ ಹೆಣವನ್ನು ಕೊಂಡು ಹೋಗಬೇಕಷ್ಟೇ’’ ನನಗೆ ಕೋಪ ಬಂದಿತ್ತು.

ಈ ಮನೆಯನ್ನು ಬಿಟ್ಟು ಹೋಗುವುದೆಂದರೆ ನನಗೆ ಗಂಡನನ್ನು ಕಳೆದು ಕೊಂಡಷ್ಟೆ ನೋವಾಗತೊಡಗಿತ್ತು. ಗಂಡನಷ್ಟೇ ಆ ಮನೆಯೂ ನನ್ನ ಹೃದಯದಲ್ಲಿ ತುಂಬಿ ಹೋಗಿತ್ತು. ಈ ಮನೆಯ ಪ್ರತಿಯೊಂದು ಕಂಬವೂ, ಪ್ರತಿಯೊಂದು ಮರಳೂ, ಪ್ರತಿಯೊಂದು ವಸ್ತುಗಳೂ ನನ್ನ ಜೊತೆ ಮಾತನಾಡುತ್ತಿದ್ದವು. ಈ ಮನೆಯೇ ನನ್ನ ಲೋಕವಾಗಿತ್ತು. ನನ್ನ ಸರ್ವಸ್ವವಾಗಿತ್ತು.

ಒಂದು ಕ್ಷಣ ಸೆಟೆದು ನಿಂತವರಂತೆ ಕಂಡ ಅಮ್ಮ, ಹೊರಗೆ ಹೋಗಿ ತಂದೆಯನ್ನು ಕರೆ ತಂದರು.

‘‘ಏನಮ್ಮ ಇದೆಲ್ಲ ಹುಡುಗಾಟಿಕೆ, ಹಾಗೆಲ್ಲ ಮಾಡಬಾರದು. ನೀನು ತಯಾರಾಗು ಅಬ್ಬು ಕಾರು ಬರಲಿಕ್ಕೆ ಹೇಳಿದ್ದಾನೆ. ನಾವು ಬೆಳಗ್ಗೆ ಬೆಳಕು ಹರಿಯುವುದಕ್ಕೆ ಮೊದಲು ಮನೆ ತಲುಪಬೇಕು.’’ ಅಪ್ಪನ ಮಾತಿನಲ್ಲಿರುವ ಪ್ರೀತಿ ನನ್ನ ಬಾಯಿಯನ್ನು ಕಟ್ಟಿಹಾಕಿತ್ತು. ಅವರು ಬಳಿ ಬಂದು ನನ್ನ ತಲೆ ಸವರಿದರು. ನಾನು ಅವರ ಮುಖ ನೋಡಿದೆ. ಆ ಮುಖದ ತುಂಬಾ ನೋವು ಮಡುಗಟ್ಟಿತ್ತು.

‘‘ಅಪ್ಪಾ...’’ ಎಂದೆ.

‘‘ಏನಮ್ಮಾ...’’

‘‘ಅಪ್ಪಾ, ನಾನು ಬರುವುದಿಲ್ಲಪ್ಪಾ.’’

‘‘ಹಾಗೆ ಹೇಳಬಾರದಮ್ಮಾ.. ನಾವು ಹೋಗಲೇಬೇಕಮ್ಮಾ.’’

‘‘ಅಪ್ಪಾ, ನಿಮ್ಮ ಮಗಳ ಮೇಲೆ ನಿಮಗೆ ಪ್ರೀತಿ ಇಲ್ಲವೇನಪ್ಪಾ’’

‘‘ಇದೆಯಮ್ಮಾ’’

‘‘ನಿಮ್ಮ ಮಗಳು ಬದುಕಿರಬೇಕೆಂದು ನಿಮಗೆ ಆಸೆ ಇಲ್ಲವೇನಪ್ಪಾ’’

‘‘ಯಾಕಮ್ಮಾ ಹಾಗೆಲ್ಲ ಮಾತನಾಡುತ್ತೀ?’’

‘‘ಹೌದಪ್ಪಾ, ಈ ಮನೆ ಬಿಟ್ಟರೆ ನನಗೆ ಬೇರೆ ಜಗತ್ತಿಲ್ಲ. ಈ ಮನೆ ಬಿಟ್ಟರೆ ನಾನು ಬದುಕಿರುವುದಿಲ್ಲ. ನೀರಿನಿಂದ ಹೊರತೆಗೆದ ಮೀನಿನಂತೆ ನಾನು ಸತ್ತು ಹೋಗುತ್ತೇನಪ್ಪಾ.’’

ಅಂದು ರಾತ್ರಿ ಇಡೀ ಅಪ್ಪ, ಅಮ್ಮ, ತಂಗಿ ನನ್ನನ್ನು ಒತ್ತಾಯಿಸಿದರು. ಬುದ್ಧಿ ಹೇಳಿದರು. ಬೈದರು - ನನಗೆ ಹೊಡೆಯುವುದೊಂದು ಬಾಕಿ ಬೇರೆಲ್ಲ ರೀತಿಯ ಮಾತುಗಳನ್ನು ಆಡಿದರು. ನಾನು ಒಪ್ಪಲಿಲ್ಲ. ಅಂದು ರಾತ್ರಿ ನಾವ್ಯಾರೂ ನಿದ್ರಿಸಲಿಲ್ಲ.

ಬೆಳಗ್ಗೆ ಬಾಂಗ್‌ಗಿಂತ ಮೊದಲೇ ತಾಯಿ, ತಂಗಿ, ತಲೆ ಮೈ ತುಂಬಾ ಒಲ್ಲಿ ಸುತ್ತಿಕೊಂಡರು. ನನಗೊಂದು ಒಲ್ಲಿಕೊಟ್ಟು ಹೊರಡುವಂತೆ ಗದರಿಸಿ ಬಟ್ಟೆ ತುಂಬಿದ ಚೀಲಗಳನ್ನು ಹಿಡಿದುಕೊಂಡು ಕೋಣೆಯಿಂದ ಹೊರನಡೆದರು. ಭಯ, ಅಸಹಾಯಕತೆಯಿಂದ ಏನೂ ಮಾಡಲು ತೋಚದೆ ನಾನು ಕೋಣೆಯ ಬಾಗಿಲನ್ನು ಮುಚ್ಚಿ ಚಿಲಕ ಹಾಕಿ ಬಿಟ್ಟೆ.

ಹೊರಗೆ ಅಪ್ಪ, ಅಮ್ಮ, ತಂಗಿ ಬಾಗಿಲು ತಟ್ಟಿ ಕೂಗತೊಡಗಿದರು. ನಾನು ಬಾಗಿಲು ತೆರೆಯಲಿಲ್ಲ. ಬಾಗಿಲಿಗೆ ಬೆನ್ನು ಒತ್ತಿ ಹಿಡಿದು ನಾನು ಮೌನವಾಗಿ ನಿಂತುಬಿಟ್ಟೆ. ಹೀಗೆ ಬಹಳ ಹೊತ್ತು ಕರೆದರೂ ನಾನು ಬಾಗಿಲು ತೆರೆಯಲಿಲ್ಲ. ಕೊನೆಗೆ ನಿನ್ನಜ್ಜನ ಅಕ್ಕ ಕರೆದರು. ಆಗಲೂ ನಾನು ಓಗೊಡಲಿಲ್ಲ. ಮತ್ತೆ ಕೆಲ ಹೊತ್ತು ಯಾರೂ ಕರೆಯಲಿಲ್ಲ. ಇಡೀ ಮನೆಯನ್ನು ನಿಶ್ಶಬ್ದ ಆವರಿಸಿಬಿಟ್ಟಿತ್ತು.

‘ಫಾತಿಮಾ ಬಾಗಿಲು ತೆಗಿ’ ಮೌನವನ್ನು ಸೀಳಿ ಬಂದ ನಿನ್ನಜ್ಜನ ಆ ಪ್ರೀತಿಯ ಕರೆ ನನ್ನ ಕಿವಿಗಪ್ಪಳಿಸಿ ಹೃದಯವನ್ನು ನಾಟಿತ್ತು... ನಾನು ಕ್ಷಣವೂ ತಡ ಮಾಡದೆ ಬಾಗಿಲು ತೆರೆದಿದ್ದೆ. ನಿನ್ನಜ್ಜ ವರಾಂಡದಲ್ಲಿ ಎತ್ತಲೋ ನೋಡುತ್ತಾ ಕೈ ಕಟ್ಟಿ ಕಂಬದಂತೆ ನಿಂತಿದ್ದರು. ಅಮ್ಮ, ತಂಗಿ ಬಂದು ನಾನು ಪ್ರತಿಭಟಿಸಿದರೂ ನನಗೆ ಒಲ್ಲಿ ಹೊದಿಸಿದರು. ಇಬ್ಬರೂ ನನ್ನ ಕೈಗಳನ್ನು ಹಿಡಿದು ಬಾಗಿಲಿನತ್ತ ಎಳೆದೊಯ್ಯ ತೊಡಗಿದರು. ನಿನ್ನಜ್ಜನ ಬಾಯಿಯಿಂದ ಒಂದಕ್ಷರವೂ ಹೊರಬೀಳಲಿಲ್ಲ. ಅವರು ಇನ್ನೂ ಹಾಗೆಯೇ ನಿಂತಿದ್ದರು.

‘‘ನಾನು ಬರುವುದಿಲ್ಲ, ಇಲ್ಲಿಯೇ ಸಾಯ್ತೇನೆ’’ ನಾನು ಕಿರುಚತೊಡಗಿದೆ.

ತಾಯಿ, ತಂಗಿಯ ಹಿಡಿತ ಬಿಗಿಯಾಗತೊಡಗಿತು. ಈಗಲೂ ನಿನ್ನಜ್ಜ ಬಾಯಿ ತೆರೆಯಲಿಲ್ಲ. ನಾವೀಗ ಮೆಟ್ಟಿಲ ಬಳಿ ಬಂದಾಗಿತ್ತು. ಅಂಗಳದಲ್ಲಿ ಕಾರು ನಿಂತಿದ್ದು ಕಾಣಿಸುತ್ತಿತ್ತು. ನನಗೀಗ ಬೇರೆ ದಾರಿಯೇ ಇರಲಿಲ್ಲ. ಇಬ್ಬರನ್ನೂ ಬಲವಾಗಿ ದೂಡಿ ಅವರ ಕೈಯಿಂದ ಬಿಡಿಸಿಕೊಂಡು ಓಡಿ ಬಂದು ನಿನ್ನಜ್ಜನ ಬಳಿ ಕುಸಿದು ಬಿಟ್ಟಿದ್ದೆ. ಅಜ್ಜ ಇನ್ನೂ ಹಾಗೆಯೇ ನಿಂತಿದ್ದರು.

‘‘ನನ್ನನ್ನು ಕಳಿಸಬೇಡಿ. ನಾನಿಲ್ಲಿಯೇ ಇರುತ್ತೇನೆ’’ ನಿನ್ನಜ್ಜನ ಕಾಲುಗಳನ್ನು ಹಿಡಿದು ಕೊಂಡು ನಾನು ಅಳತೊಡಗಿದ್ದೆ. ಅಪ್ಪ, ಅಮ್ಮ, ತಂಗಿ ಬಂದು ಬಿಡಿಸಲು ಪ್ರಯತ್ನಿಸಿದಷ್ಟೂ ನಾನು ನನ್ನ ಹಿಡಿತವನ್ನು ಗಟ್ಟಿಗೊಳಿಸುತ್ತಿದ್ದೆ.

‘‘ಈ ಮನೆಗೆ ಬೆಳಕಾಗಬೇಕು ಎಂದಿರಿ ನನಗದು ಸಾಧ್ಯವಾಗಲಿಲ್ಲ. ಈ ಮನೆಗೆ ತಾಯಿಯಾಗಬೇಕು ಎಂದಿರಿ ನನಗೆ ಸಾಧ್ಯವಾಗಲಿಲ್ಲ. ಈ ಮನೆಯ ಹಾಡಾಗಬೇಕು ಎಂದಿರಿ ಅದೂ ನನಗೆ ಸಾಧ್ಯವಾಗಲಿಲ್ಲ. ದೇವರು ನನಗೆ ಆ ಯಾವ ಭಾಗ್ಯವನ್ನೂ ಕೊಡಲಿಲ್ಲ. ಈಗ ನಾನು ನಿಮ್ಮಲ್ಲಿ ಒಂದು ಮಾತು ಕೇಳುತ್ತೇನೆ. ನೀವು ನಡೆಸಿಕೊಡಬೇಕು. ಈ ಮನೆಯ ಕೆಲಸದವಳಾಗಿ, ಈ ಮನೆಯ ಒಬ್ಬಳು ಸೇವಕಿಯಾಗಿ ಈ ಮನೆಯಲ್ಲಿ ಇರಲಿಕ್ಕೆ ನನಗೆ ಅವಕಾಶ ಮಾಡಿಕೊಡಿ. ನಿಮ್ಮ ಈ ಋಣವನ್ನು ನಾನು ಸಾಯುವವರೆಗೂ ಮರೆಯುವುದಿಲ್ಲ. ನನ್ನನ್ನು ಕರೆದುಕೊಂಡು ಹೋಗಬೇಡಿ ಹೇಳಿ’’ ನಾನು ಅಂಗಲಾಚುತ್ತಾ ಕಣ್ಣೀರು ಹಾಕತೊಡಗಿದೆ.

‘‘ಮಾವಾ..’’ ಕೆಲವು ಕ್ಷಣಗಳ ಬಳಿಕ ನಿನ್ನಜ್ಜನ ಬಾಯಿಯಿಂದ ಮಾತು ಹೊರಬಿತ್ತು.

‘‘ಮಾವಾ, ಫಾತಿಮಾ ಇಲ್ಲೇ ಇರಲಿ. ಕರೆದುಕೊಂಡು ಹೋಗುವುದು ಬೇಡ. ನೀವು, ಅತ್ತೆ ಇಲ್ಲೇ ಇರಿ.’’

ನಾನು ಅಳು ನಿಲ್ಲಿಸಿ ತಲೆ ಎತ್ತಿ ನಿನ್ನ ಅಜ್ಜನನ್ನು ನೋಡಿದೆ. ಅವರು ಕಣ್ಣುಮುಚ್ಚಿ ಇನ್ನೂ ಹಾಗೆಯೇ ನಿಂತಿದ್ದರು. ನಾನು ಎರಡೂ ಕೈಗಳನ್ನು ಮುಗಿದು ಅಜ್ಜನಿಗೆ ಕೃತಜ್ಞತೆ ಸಲ್ಲಿಸಿದೆ. ನನ್ನ ಹಿಡಿತ ಸಡಿಲವಾಗುತ್ತಿದ್ದಂತೆಯೇ ಹೆಜ್ಜೆ ಬದಲಿಸಿದ ನಿನ್ನಜ್ಜ ಮಸೀದಿಗೆ ತೆರಳಿದರು. ಜೋರಾಗಿ ಸುರಿದ ಮಳೆ-ಬಿರುಗಾಳಿ ನಿಂತ ಮೇಲೆ ಹೇಗಿರುತ್ತೋ ಹಾಗಾಗಿತ್ತು ನನ್ನ ಮನಸ್ಸು. ನಾನು ಎದ್ದು ಕೋಣೆಯತ್ತ ನಡೆದೆ. ಅಪ್ಪ, ಅಮ್ಮ, ತಂಗಿ ಇನ್ನೂ ಅಲ್ಲೇ ಗರಬಡಿದವರಂತೆ ನಿಂತಿದ್ದರು.

ನಾಲ್ಕು ತಿಂಗಳು ಹತ್ತು ದಿನ ಗಂಡ ಸತ್ತ ಹೆಂಗಸರ ‘ಇದ್ದತ್’ ನ ಸಮಯ. ಈ ಸಮಯದಲ್ಲಿ ಅವರು ರಕ್ತಸಂಬಂಧಿಗಳನ್ನು ಬಿಟ್ಟು ಬೇರೆ ಯಾವುದೇ ಗಂಡಸರನ್ನು ನೋಡಬಾರದು. ಯಾವ ಗಂಡಸಿನ ಜೊತೆಯೂ ಮಾತನಾಡಬಾರದು. ಅವರ ಕಣ್ಣಿಗೆ ಬೀಳಬಾರದು. ಕೋಣೆಯಿಂದ ಏನಾದರೂ ಅಗತ್ಯಕ್ಕೆ ಹೊರಗೆ ಬರಬೇಕಾದರೆ ಯಾರೂ ಗಂಡಸರಿಲ್ಲದ ಸಮಯ ನೋಡಿ ಬರಬೇಕು. ದಿನಾಲೂ ‘ತೌಬಾ’ ಹೇಳಬೇಕು. ಬಿಳಿ ಸೀರೆಯನ್ನೇ ಉಡಬೇಕು. ಆಭರಣಗಳನ್ನು ಧರಿಸಬಾರದು. ಹೂ ಮುಡಿಯಬಾರದು, ಅಲಂಕಾರ ಮಾಡಿಕೊಳ್ಳಬಾರದು. ಯಾವಾಗಲೂ ನಮಾಝ್ ಮಾಡುತ್ತಾ, ತಸ್ಬೀ, ದ್ಸಿಕ್ರ್ ಹೇಳುತ್ತಾ, ದುಆ ಮಾಡುತ್ತಾ, ಕುರ್‌ಆನ್, ಮೌಲೂದು ಓದುತ್ತಾ ಇರಬೇಕು.

ಆದರೆ ನಾನು.

ಯಾರು ಏನೇ ಹೇಳಿದರೂ ನಾನು ಮಾತ್ರ ಹಾಗೆ ಇರಲೇ ಇಲ್ಲ. ಮೊದಲಿನಂತೆಯೇ ಇಡೀ ಮನೆಯ ಕೆಲಸವನ್ನು ನಾನೇ ಮಾಡುತ್ತಿದ್ದೆ. ಆದರೆ ಹೊಸಿಲು ದಾಟಿ ಹೊರಗೆ ಇಳಿಯುತ್ತಿರಲಿಲ್ಲ ಅಷ್ಟೆ. ನಿನ್ನಜ್ಜ ಮನೆಯಲ್ಲಿಲ್ಲದ ಸಮಯ ನೋಡಿ ಅವರ ಕೋಣೆಯೆಲ್ಲ ಶುಚಿ ಮಾಡಿ, ಒಗೆದು ಒಣಗಿಸಿದ ಅವರ ಬಟ್ಟೆಗಳನ್ನೆಲ್ಲ ಮಡಚಿ ಸುಲಭದಲ್ಲಿ ಅವರ ಕೈಗೆ ಸಿಗುವಂತೆ ಇಡುತ್ತಿದ್ದೆ. ಅವರು ಬಂದರು ಎಂದರೆ ನಾನು ಕೋಣೆ ಸೇರಿ ಬಿಡುತ್ತಿದ್ದೆ. ಅಮ್ಮ ನನಗೆ ಬಯ್ಯುತ್ತಾ ಇದ್ದರು. ‘‘ನೀನು ಹೀಗೆಲ್ಲ ಮಾಡಿದರೆ ನರಕಕ್ಕೆ ಹೋಗ್ತಿ’’ ಎಂದು ಹೆದರಿಸುತ್ತಿದ್ದರು. ‘‘ಈ ಮನೆಯ ಸೇವೆ ಮಾಡಿ ನಾನು ನರಕಕ್ಕೆ ಹೋಗುವುದಾದರೆ ಅದಕ್ಕೂ ನಾನು ಸಿದ್ಧಳಿದ್ದೇನೆ ಅಮ್ಮಾ’’ ಎಂದು ಅಮ್ಮನ ಬಾಯಿ ಮುಚ್ಚಿಸುತ್ತಿದ್ದೆ. ಆದರೂ ಅಮ್ಮ ಮನ ಮನ ಮಾಡುತ್ತಲೇ ಇದ್ದರು. ಅವರ ಮುಖ ತುಂಬಾ ಅಸಹನೆ ಎದ್ದು ಕಾಣುತ್ತಿತ್ತು. ನಾನು ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಮೌನವಾಗಿ ಮನೆಯ ಕೆಲಸಗಳನ್ನೆಲ್ಲ ಮಾಡಿ ಬಂದು ಕೋಣೆ ಸೇರುತ್ತಿದ್ದೆ.

ಪ್ರತಿದಿನ ಒಮ್ಮೆಯಾದರೂ ನಾನು ನಿನ್ನ ಅಜ್ಜನನ್ನು ಕದ್ದು ನೋಡುತ್ತಿದ್ದೆ. ಅವರು ತುಂಬಾ ಸೊರಗಿದ್ದರು. ಮುಖ ಬಾಡಿ ಹೋಗಿತ್ತು. ಸರಿಯಾಗಿ ಊಟ-ನಿದ್ದೆ ಇಲ್ಲದೆ ಕಡ್ಡಿಯಂತಾಗಿದ್ದರು. ಕಣ್ಣುಗಳಲ್ಲಿ ಮೊದಲಿನ ಕಾಂತಿ ಇರಲಿಲ್ಲ. ಒಮ್ಮಿಮ್ಮೆ ಬೆಳಗ್ಗೆ ಎದ್ದು ಹೊರಟರೆ ಮಧ್ಯರಾತ್ರಿ ಮನೆಗೆ ಬರುತ್ತಿದ್ದರು. ಅವರನ್ನು ಈಗ ಎಲ್ಲಿಗೆ ಹೋಗಿದ್ದೀರಿ, ಯಾಕೆ ಹೋಗಿದ್ದೀರಿ, ಯಾಕೆ ತಡವಾಯಿತು, ಊಟ ಮಾಡಿದಿರಾ, ತಿಂಡಿ ತಿಂದಿದ್ದೀರಾ ಎಂದು ಕೇಳುವವರು, ಹೇಳುವವರು, ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಅವರನ್ನು ನೋಡಿದರೆ ಅಯ್ಯೋ ಎನಿಸುತ್ತಿತ್ತು.

ಮತ್ತೆ ನಲ್ವತ್ತನೇ ದಿನದ ಕಾರ್ಯಕ್ಕೆ ಬಂಧುಗಳು, ಊರವರು ಎಲ್ಲ ಸೇರಿದರು. ಮೌಲವಿ ಬಂದರು. ಯಾಸೀನ್, ಮೌಲೂದು ಓದಿದರು. ದುಆ ಮಾಡಿದರು. ಎಲ್ಲರಿಗೂ ನೈಚೋರು ಎತ್ತಿನ ಮಾಂಸದ ಔತಣ. ಎಲ್ಲರೂ ಹೊಟ್ಟೆ ತುಂಬ ತಿಂದು ತೇಗಿದರು. ಎಲ್ಲರ ಮುಖದಲ್ಲೂ ತೃಪ್ತಿ ಸಮಾಧಾನ. ನಾನು ಅಂದು ಕೋಣೆಯಿಂದ ಹೊರಬರಲಿಲ್ಲ. ಹೆಂಗಸರು ಬಂದವರೆಲ್ಲ ನನ್ನನ್ನು ರೋಗಿಯನ್ನು ನೋಡುವಂತೆ ನೋಡಿ, ಸಾಂತ್ವನ ಹೇಳಿ, ಅನುಕಂಪ ಸುರಿಸಿ ಹೋದರು.

(ಗುರುವಾರ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News