×
Ad

ಆರ್‌ಬಿಐನಿಂದ ಬಡ್ಡಿದರ ಕಡಿತ: ಅಗ್ಗದ ಗೃಹಸಾಲ ನಿರೀಕ್ಷೆ

Update: 2016-10-04 23:55 IST

ಮುಂಬೈ,ಅ.4: ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಸಾಲಗಳ ಮೇಲಿನ ಬಡ್ಡಿದರಗಳನ್ನು ಶೇ.0.25ರಷ್ಟು ಕಡಿತಗೊಳಿಸಿದೆ. ಹಣದುಬ್ಬರ ತಗ್ಗುತ್ತಿರುವುದು ತನ್ನ ಕ್ರಮಕ್ಕೆ ಮುಖ್ಯಕಾರಣ ಎಂದಿರುವ ಆರ್‌ಬಿಐನ ಈ ಹೆಜ್ಜೆ ಬಡ್ಡಿದರಗಳಲ್ಲಿ ಯಥಾಸ್ಥಿತಿಯನ್ನು ನಿರೀಕ್ಷಿಸಿದ್ದ ಪೇಟೆಯನ್ನು ಅಚ್ಚರಿಯಲ್ಲಿ ಕೆಡವಿದೆ. ಇದೇ ವೇಳೆ ಬಡ್ಡಿದರ ಕಡಿತದಿಂದ ಗೃಹಸಾಲಗಳು ಅಗ್ಗವಾಗುವ ಮತ್ತು ಕಂತುಗಳ ಮೊತ್ತವು ಕಡಿಮೆಯಾಗುವ ನಿರೀಕ್ಷೆಗೆ ಹೆಚ್ಚಿನ ಇಂಬು ದೊರಕಿದೆ.

 ಚಿಲ್ಲರೆ ಹಣದುಬ್ಬರವು ಕಳೆದ ಐದು ತಿಂಗಳಲ್ಲಿ ಕನಿಷ್ಠ ಮಟ್ಟವಾದ ಶೇ.5.05ಕ್ಕೆ ಕುಸಿದಿದ್ದು, ಇದು ಹಣಕಾಸು ನೀತಿ ಸಮಿತಿಯ ಗುರಿಯಾದ ಶೇ.2-6ರ ವ್ಯಾಪ್ತಿಯಲ್ಲಿದೆ.

ಉತ್ತಮ ಮಳೆಯಾಗಿರುವುದರಿಂದ ಆಹಾರ ವಸ್ತುಗಳ ಬೆಲೆಗಳು ಇಳಿದಿದ್ದು, ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರವು ಇನ್ನಷ್ಟು ತಗ್ಗುವ ನಿರೀಕ್ಷೆಯಿದೆ.

 ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್‌ರ ಅಧ್ಯಕ್ಷತೆಯ ಸಮಿತಿಯು ಬ್ಯಾಂಕುಗಳು ಆರ್‌ಬಿಐಯಿಂದ ಪಡೆದುಕೊಳ್ಳುವ ಸಾಲದ ಮೇಲಿನ ಬಡ್ಡಿ ದರವನ್ನು(ರೆಪೊ) ಶೇ.6.50ರಿಂದ ಶೇ.6.25ಕ್ಕೆ ಕಡಿತಗೊಳಿಸಲು ನಿರ್ಧರಿಸಿತು.

ಸೆ.6ರಂದು ರಘುರಾಮ ರಾಜನ್ ಅವರಿಂದ ಅಧಿಕಾರ ಪಡೆದುಕೊಂಡ ಬಳಿಕ ಇದು ಊರ್ಜಿತ್ ಪಟೇಲ್ ಅವರ ಪ್ರಪ್ರಥಮ ಹಣಕಾಸು ನೀತಿ ಪರಾಮರ್ಶೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News