ಹೊಸ ದಾಖಲೆ ನಿರ್ಮಿಸಿದ ಶ್ವೇತಭವನದ ಆನ್ ಲೈನ್ ಮನವಿ, ಅಂದಹಾಗೆ ಆ ಮನವಿ ಯಾವುದು ಗೊತ್ತೇ ?

Update: 2016-10-05 14:19 GMT

ವಾಶಿಂಗ್ಟನ್, ಅ. 5: ಪಾಕಿಸ್ತಾನವನ್ನು ‘ಭಯೋತ್ಪಾದಕರಿಗೆ ಸರಕಾರಿ ಆಶ್ರಯ ನೀಡುವ ದೇಶ’ವನ್ನಾಗಿ ಘೋಷಿಸಬೇಕೆಂದು ಕೋರುವ ಶ್ವೇತಭವನದ ಆನ್‌ಲೈನ್ ಮನವಿಗೆ ಇನ್ನೂ 50,000ಕ್ಕೂ ಅಧಿಕ ಸಹಿಗಳು ಸೇರ್ಪಡೆಯಾಗಿವೆ. ಆ ಮೂಲಕ, ಅದು ಅಮೆರಿಕದ ಈವರೆಗಿನ ಅತ್ಯಂತ ಜನಪ್ರಿಯ ಮನವಿ ಆಗಿದೆ.

‘‘ಪಾಕಿಸ್ತಾನವನ್ನು ಭಯೋತ್ಪಾದಕರಿಗೆ ಸರಕಾರಿ ಆಶ್ರಯ ನೀಡುವ ದೇಶವನ್ನಾಗಿ ಘೋಷಿಸಬೇಕು ಎಂಬುದಾಗಿ ನಾವು ಜನರು ಸರಕಾರವನ್ನು ಕೋರುತ್ತೇವೆ’’ ಎಂಬ ಒಕ್ಕಣೆಯ ಮನವಿಯನ್ನು ಶ್ವೇತಭವನ ಸೋಮವಾರ 6,13,830 ಸಹಿಗಳೊಂದಿಗೆ ಸಂಗ್ರಹಕ್ಕೆ ಸೇರಿಸಿತ್ತು ಹಾಗೂ ಮನವಿಯ ಪ್ರಸಾರವನ್ನು ನಿಲ್ಲಿಸಲಾಗಿದೆ ಎಂದು ಹೇಳಿತ್ತು.

ಆದರೆ, ಮಂಗಳವಾರ ಮಧ್ಯಾಹ್ನದ ವೇಳೆಗೆ, ಮನವಿಯ ಸಹಿಗಳ ಸಂಖ್ಯೆ 6,65,769ಕ್ಕೇರಿತ್ತು. ಅಂದರೆ, 51,939 ಹೊಸ ಸಹಿಗಳು ಬಿದ್ದಿದ್ದವು.
ಇದು ಈವರೆಗಿನ ಶ್ವೇತಭವನದ ಮನವಿಗಳಲ್ಲೇ ಅತ್ಯಂತ ಜನಪ್ರಿಯವಾಗಿದೆ. ಈವರೆಗಿನ ಶ್ವೇತಭವನದ ಯಾವುದೇ ಮನವಿಯ ಸಹಿಗಳ ಸಂಖ್ಯೆ 3,50,000ವನ್ನು ದಾಟಿರಲಿಲ್ಲ.

ಈವರೆಗೆ ಇದಕ್ಕೆ ಶ್ವೇತಭವನ ಯಾವುದೇ ವಿವರಣೆ ನೀಡಿಲ್ಲ.

ಆದಾಗ್ಯೂ, ಶ್ವೇತಭವನವು ಮನವಿಯ ಪ್ರಸಾರವನ್ನು ನಿಲ್ಲಿಸುವ ಮೊದಲೇ ಬಿದ್ದಿದ್ದ ಸಹಿಗಳನ್ನು ಸ್ಥೂಲ ಪರಿಶೀಲನೆಯ ಬಳಿಕ ಮನವಿಗೆ ಸೇರಿಸಿರುವ ಸಾಧ್ಯತೆಯಿದೆ.

ಹಾಗೆಯೇ ನಡೆದಿರುವುದಾದರೆ, ಮನವಿಯ ಸಹಿ ಅಭಿಯಾನದಲ್ಲಿ ವಂಚನೆ ನಡೆದಿದೆ ಎಂಬ ಆರೋಪದಲ್ಲಿ ಸತ್ಯ ಇರುವಂತೆ ಕಾಣುವುದಿಲ್ಲ.

ಇನ್ನೊಂದು ಸಾಧ್ಯತೆಯೆಂದರೆ, ಮನವಿಯ ಅಂಶವನ್ನು ಒಬಾಮ ಆಡಳಿತ ಪರಿಶೀಲನೆ ನಡೆಸಬೇಕಾದರೆ 1 ಲಕ್ಷ ಸಹಿಗಳು ಸಾಕು. ಅದಾಗಲೇ, ಸಹಿಗಳ ಸಂಖ್ಯೆ ಈ ಗಡಿ ದಾಟಿರುವುದರಿಂದ ಹೊಸ ಸಹಿಗಳನ್ನು ಪಡೆಯುವುದನ್ನು ನಿಲ್ಲಿಸಲು ಮನವಿಯನ್ನು ಸಂಗ್ರಹಾಗಾರಕ್ಕೆ ಸೇರಿಸಿರುವ ಸಾಧ್ಯತೆಯಿದೆ.

ಒಬಾಮ ಆಡಳಿತವು ನಿಗದಿತ 60 ದಿನಗಳಲ್ಲಿ ಮನವಿಗೆ ಸಂಬಂಧಿಸಿ ಅಧಿಕೃತ ಪ್ರತಿಕ್ರಿಯೆಯನ್ನು ನೀಡಬಹುದೆಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News