×
Ad

ಪಾಕ್, ಭಾರತಕ್ಕೆ ಯುದ್ಧ ವಿರೋಧಿ ಸಂದೇಶ ನೀಡಿದ ಬಿಲಾವಲ್ ಭುಟ್ಟೊ

Update: 2016-10-05 20:03 IST

ಇಸ್ಲಾಮಾಬಾದ್, ಅ. 5: ಭಾರತ ಮತ್ತು ಪಾಕಿಸ್ತಾನಗಳ ಆಗಸದಲ್ಲಿ ಯುದ್ಧದ ಕಾರ್ಮೋಡ ವ್ಯಾಪಿಸುತ್ತಿರುವಂತೆಯೇ, ಪಾಕಿಸ್ತಾನದ ಪ್ರತಿಪಕ್ಷ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕ ಬಿಲಾವಲ್ ಭುಟ್ಟೊ ಎರಡೂ ದೇಶಗಳಿಗೆ ಶಾಂತಿಯ ಸಂದೇಶವೊಂದನ್ನು ನೀಡಿದ್ದಾರೆ.

ಒಂದು ಸಂದೇಶ ಮತ್ತು ಒಂದು ವೀಡಿಯೊವನ್ನು ಪಾಕಿಸ್ತಾನದ ದಿವಂಗತ ಮಾಜಿ ಪ್ರಧಾನಿ ಬೆನಝೀರ್ ಭುಟ್ಟೊರ ಮಗ ಟ್ವೀಟ್ ಮಾಡಿದ್ದಾರೆ.

‘‘ಪ್ರಿಯ ಪಾಕಿಸ್ತಾನ ಮತ್ತು ಭಾರತ. ಯುದ್ಧವೆಂದರೆ ಇದು’’ ಎಂದು ಅವರ ಒಂದು ಟ್ವೀಟ್ ಹೇಳಿದರೆ, ಇನ್ನೊಂದರಲ್ಲಿ ಯುದ್ಧ ಪೀಡಿತ ಸಿರಿಯದ ಅಲೆಪ್ಪೊ ನಗರದ ಬಾಲಕನೊಬ್ಬ ನೀಡುವ ವೀಡಿಯೊ ಹೇಳಿಕೆ ಇದೆ.

‘‘ನಮಗೆ ಇಲ್ಲಿ ತಿನ್ನಲು ಏನೂ ಇಲ್ಲ. ನಾವು ಹುಲ್ಲನ್ನು ಹುಡುಕಿ ಹುಡುಕಿ ತಿನ್ನುತ್ತೇವೆ. ಸೊಪ್ಪುಗಳನ್ನು ತಿನ್ನುತ್ತೇವೆ. ಹುಳಬಿದ್ದಿರುವ ಬ್ರೆಡ್ ತುಂಡುಗಳನ್ನು ಕಸದ ತೊಟ್ಟಿಗಳಿಂದ ಆಯ್ದು ತಿನ್ನುತ್ತೇವೆ. ನಾವು ಹಸಿವಿನಿಂದ ಬಳಲಿದ್ದು ಯಾರೂ ನಮ್ಮತ್ತ ಗಮನ ಕೊಡುವುದಿಲ್ಲ. ನಮಗೆ ನೆರವು ಬರುತ್ತಿಲ್ಲ. ನೆರವು ಬರಲು ಬಿಡಿ’’ ಎಂದು ವೀಡಿಯೊದಲ್ಲಿ ಬಾಲಕ ಗೋಗರೆಯುತ್ತಿರುವ ದೃಶ್ಯವಿದೆ.

ಅಲೆಪ್ಪೊದಲ್ಲಿ ಸರಕಾರಿ ಸೈನಿಕರು ಮತ್ತು ಬಂಡುಕೋರರ ನಡುವೆ ಸಿಕ್ಕಿಹಾಕಿಕೊಂಡಿರುವ ನಾಗರಿಕರು ತಿನ್ನಲು ಅಹಾರವಿಲ್ಲದೆ ಸಾಯುತ್ತಿರುವುದನ್ನು ಸ್ಮರಿಸಬಹುದಾಗಿದೆ.

ಭಾರತಕ್ಕೆ ಸಂಬಂಧಿಸಿ ಸೋಮವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಬಿಲಾವಲ್ ಭುಟ್ಟೊ ಭಾಗವಹಿಸಿದ್ದರು.

ಕಾಶ್ಮೀರ ವಿವಾದಕ್ಕೆ ಸೇನಾ ಪರಿಹಾರ ಸಾಧ್ಯವಿಲ್ಲ ಎಂಬುದಾಗಿ ಬಿಲಾವಲ್ ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಅವರು ಪ್ರಧಾನಿ ನವಾಝ್ ಶರೀಫ್‌ರ ವಿದೇಶ ನೀತಿಯನ್ನೂ ಟೀಕಿಸಿದ್ದಾರೆ ಎನ್ನಲಾಗಿದೆ. ಅವರ ನೀತಿಯು ವೈರತ್ವದ ಪರಿಸ್ಥಿತಿಯನ್ನು ನಿರ್ಮಿಸಿದೆ ಎಂದಿದ್ದಾರೆ.

1971ರಲ್ಲಿ, ತನ್ನ ಅಜ್ಜ ಝುಲ್ಫೀಕರ್ ಅಲಿ ಭುಟ್ಟೊ ಸದೃಢ ರಾಜತಾಂತ್ರಿಕತೆ ಮತ್ತು ದಿಟ್ಟ ವಿದೇಶ ನೀತಿಯ ಮೂಲಕ ಭಾರತದ ಆಕ್ರಮಣದಿಂದ ಪಾಕಿಸ್ತಾನದ ನೆಲವನ್ನು ವಶಪಡಿಸಿಕೊಂಡರು ಹಾಗೂ ಸಾವಿರಾರು ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಿಸಿದರು ಎಂದು ಬಿಲಾವಲ್ ಹೇಳಿದ್ದಾರೆ ಎಂದು ‘ಇಂಟರ್‌ನ್ಯಾಶನಲ್ ಬಸ್ನೆಸ್ ಟೈಮ್ಸ್’ ಹೇಳಿದೆ.

‘‘ಈ ರೀತಿಯಾಗಿ ನಾವು ನಮ್ಮ ರಾಜತಾಂತ್ರಿಕ ಗುರಿಗಳನ್ನು ಸಾಧಿಸಬಹುದಾಗಿದೆ’’ ಎಂದು ಅವರು ಹೇಳಿದ್ದಾರೆನ್ನಲಾಗಿದೆ.

ಪಾಕಿಸ್ತಾನದಲ್ಲಿ ನಡೆಯಬೇಕಾಗಿದ್ದ ಸಾರ್ಕ್ ಶೃಂಗ ಸಮ್ಮೇಳನ ರದ್ದಾಗಿರುವ ಬಗ್ಗೆ ಆ ದೇಶದ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಪ್ರತಿಪಕ್ಷಗಳು ಸರಕಾರವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News