×
Ad

ರಾಮಲೀಲಾದಲ್ಲಿ ನಟಿಸಲು ಬಾಲಿವುಡ್ ನಟ ಸಿದ್ದೀಕಿಗೆ ಶಿವಸೇನೆ ತಡೆ

Update: 2016-10-07 18:43 IST

ಹೊಸದಿಲ್ಲಿ, ಅ.7: ‘ಮುಸ್ಲಿಮನೆಂಬ ಕಾರಣಕ್ಕಾಗಿ ಹಿಂದೂ ಉತ್ಸವವೊಂದರಲ್ಲಿ ಪ್ರದರ್ಶನ ನೀಡದಂತೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ದೀಕಿಗೆ ಬಲಪಂಥೀಯ ರಾಷ್ಟ್ರೀಯ ವಾದಿಗಳು ಒತ್ತಡ ಹೇರಿದ್ದಾರೆ.

ಹಿಂದೂ ಪುರಾಣವಾಗಿರುವ ರಾಮಾಯಣವನ್ನಾಧರಿಸಿ, ದೇಶಾದ್ಯಂತ ಪ್ರದರ್ಶನಗೊಳ್ಳುವ ‘ರಾಮಲೀಲಾ’ ರಂಗೋತ್ಸವದ ವೇದಿಕೆಗೆ ಮುಸ್ಲಿಂ ನಟನೊಬ್ಬನು ಏರುವುದನ್ನು ತಾವು ವಿರೋಧಿಸುತ್ತೇವೆಂದು ಶಿವಸೇನೆಯ ಕೆಲವು ಸದಸ್ಯರು ತಿಳಿಸಿದ್ದಾರೆ.

ರಾಮಲೀಲಾದಲ್ಲಿ ಅಭಿನಯಿಸುವುದು ತನ್ನ ಬಾಲ್ಯದ ಕನಸೆಂದು ಸಿದ್ದೀಕಿ ಹೇಳಿದ್ದರು. ಶಿವಸೇನೆ ತನ್ನ ಕಾರ್ಯಸೂಚಿಯ ಜಾರಿಗಾಗಿ ಆಗಾಗ ಹಿಂಸೆ ಹಾಗೂ ಬೆದರಿಕೆಗಳನ್ನು ಒಡ್ಡುತ್ತಿದೆ.

ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ದಶಕಂಠ ರಾವಣನ ವಿರುದ್ಧ ರಾಮನ ವಿಜಯದ ಜಾನಪದ ನಾಟಕವನ್ನು ಭಾರತದಾದ್ಯಂತ ಹಳ್ಳಿಗಳಲ್ಲಿ ಆಡಲಾಗುತ್ತದೆ. ಅನೇಕ ದಿನಗಳ ಕಾಲ ಅದಕ್ಕಾಗಿ ತಾಲೀಮು ಹಾಗೂ ಸಿದ್ಧತೆ ನಡೆಯುತ್ತದೆ.

 ಉತ್ತರಪ್ರದೇಶದ ತನ್ನ ಬುಧಾನಾ ಗ್ರಾಮದಲ್ಲಿ ರಾಮಲೀಲಾದಲ್ಲಿ ಸಿದ್ದೀಕಿ ಪ್ರದರ್ಶನ ನೀಡಲಿದ್ದರು. ಆದರೆ, ಶಿವಸೇನಾ ಕಾರ್ಯಕರ್ತರು ಅವರು ನಟಿಸಬಾರದೆಂದು ಸಂಘಟಕರಿಗೆ ಒತ್ತಡ ಹೇರಿದ ಕಾರಣ, ಸಿದ್ದೀಕಿ, ರಂಗವೇರುವ ಕ್ಷಣ ಮೊದಲು ಅದರಿಂದ ಅನಿವಾರ್ಯವಾಗಿ ಹಿಂದುಳಿಯಬೇಕಾಯಿತು.

ಬುಧಾನಾ ರಾಮಲೀಲಾದ 50-60 ವರ್ಷಗಳ ಚರಿತ್ರೆಯಲ್ಲೇ ಮುಸ್ಲಿಂ ಕಲಾವಿದನೊಬ್ಬ ರಂಗದ ಮೇಲೆ ಕಾಲಿರಿಸಿಲ್ಲ. ಅದಕ್ಕೆ ತಾವು ಈಗಲೂ ಅವಕಾಶ ನೀಡುವುದಿಲ್ಲ. ಅದು ಪರಂಪರೆಗೆ ಸಂಬಂಧಿಸಿದುದಾಗಿದೆಯೆಂದು ಶಿವಸೇನಾ ಸದಸ್ಯ ಮುಕೇಶ್ ಶರ್ಮ ಎಂಬವರು ‘ಟೈಂಸ್ ಆಫ್ ಇಂಡಿಯಾ’ಗೆ ತಿಳಿಸಿದ್ದಾರೆ.

ಆದಾಗ್ಯೂ, ಮುಂದಿನ ವರ್ಷದ ರಾಮಲೀಲಾದಲ್ಲಿ ತಾನು ಭಾಗವಹಿಸುವ ವಿಶ್ವಾಸವನ್ನು ಸಿದ್ದೀಕಿ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News