ನಡೆದದ್ದೇನು ಎನ್ನುವುದನ್ನು ಜಗತ್ತಿಗೆ ಬಹಿರಂಗಪಡಿಸಿ : ಸಿಪಿಐ
ಹೈದರಾಬಾದ್,ಅ.7: ತನ್ನ ಪ್ರದೇಶದಲ್ಲಿ ಸರ್ಜಿಕಲ್ ದಾಳಿಯಂತಹ ಯಾವುದೇ ಮಿಲಿಟರಿ ಕಾರ್ಯಾಚರಣೆ ನಡೆದಿಲ್ಲ ಎಂದು ಜಾಗತಿಕ ಮಟ್ಟದಲ್ಲಿ ಬಿಂಬಿಸುವ ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಲು ಕೇಂದ್ರವು ಈ ದಾಳಿಗಳ ಸಾಕ್ಷಗಳನ್ನು ಒದಗಿಸಬೇಕು ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎಸ್.ಸುಧಾಕರ ರೆಡ್ಡಿ ಅವರು ಇಂದಿಲ್ಲಿ ಪ್ರತಿಪಾದಿಸಿದರು.
ಸೇನಾ ಕ್ರಮವನ್ನು ಭಾರತೀಯರೆಂದೂ ಶಂಕಿಸಿಲ್ಲ. ಅಷ್ಟಕ್ಕೂ ನಮ್ಮ ಜನರೇಕೆ ಅದನ್ನು ಶಂಕಿಸಬೇಕು? ನಮ್ಮ ಜನರು ಅದನ್ನು ಸಹಜವಾಗಿಯೇ ನಂಬುತ್ತಾರೆ ಎಂದ ಅವರು, ಸರ್ಜಿಕಲ್ ದಾಳಿಗಳು ನಡೆದೇ ಇಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನವು ಅಂತರರಾಷ್ಟ್ರೀಯವಾಗಿ ಗೊಂದಲವನ್ನು ಸೃಷ್ಟಿಸುತ್ತಿದೆ. ದಾಳಿಗಳನ್ನು ನಾವು ಶಂಕಿಸುತ್ತಿಲ್ಲ. ಆದರೆ ನಿಖರವಾಗಿ ನಡೆದಿದ್ದೇನು ಎನ್ನುವುದನ್ನು ನಾವು ಜಗತ್ತಿನೆದುರು ಸಾಬೀತು ಪಡಿಸಬೇಕಿದೆ ಎಂದರು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಅವರು, ಸೇನೆಯು ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿಗಳನ್ನು ನಡೆಸಿದ ಸುದ್ದಿ ಬಹಿರಂಗಗೊಂಡಾಗ ಅದರ ಹೆಗ್ಗಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಒಪ್ಪಿಸಲು ಬಿಜೆಪಿಯವರು ಬಯಸಿದ್ದರು. ಸಾಕ್ಷವನ್ನು ಒದಗಿಸುವಂತೆ ಕೋರುವ ಮೂಲಕ ಇದನ್ನು ಪ್ರಶ್ನಿಸಿದಾಗ ಸೇನೆಯನ್ನು ಅವಮಾನಿಸಲಾಗುತ್ತಿದೆಯೆಂದು ಅವರು(ಬಿಜೆಪಿ) ಹೇಳುತ್ತಿದ್ದಾರೆ. ಹಾಗೆ ಪ್ರಶ್ನಿಸಿದವರ ದೇಶಭಕ್ತಿಯನ್ನು ಪ್ರಶ್ನಿಸಲಾಗುತ್ತಿದೆ. ಹೆಗ್ಗಳಿಕೆಯನ್ನು ಪಡೆಯಲು ಬಯಸುವ ವ್ಯಕ್ತಿ ಹೊಣೆಗಾರಿಕೆಯನ್ನೂ ವಹಿಸಿಕೊಳ್ಳಬೇಕು ಎಂದರು.