×
Ad

ಭದ್ರತಾ ಪಡೆಗಳ ಗೋಲಿಬಾರ್‌ನಲ್ಲಿ ಬಾಲಕ ಬಲಿ: ಶ್ರೀನಗರದಲ್ಲಿ ಕರ್ಫ್ಯೂ

Update: 2016-10-08 18:39 IST

ಶ್ರೀನಗರ,ಅ.8: ಶ್ರೀನಗರದಲ್ಲಿ ನಿನ್ನೆ ಸಂಜೆ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಪೆಲೆಟ್ ಗನ್‌ಗಳನ್ನು ಬಳಸಿ ಗೋಲಿಬಾರ್ ನಡೆಸಿದ್ದು, 12ರ ಹರೆಯದ ಅಮಾಯಕ ಬಾಲಕನೋರ್ವ ಸಾವನ್ನಪ್ಪಿದ್ದಾನೆ. ಇದು ನಗರದಾದ್ಯಂತ ಆಕ್ರೋ ಶವನ್ನು ಸೃಷ್ಟಿಸಿದ್ದು, ಅಧಿಕಾರಿಗಳು ಕರ್ಫ್ಯೂ ಜಾರಿಗೊಳಿಸಿದ್ದಾರೆ.

ನಗರದ ಸೈದ್‌ಪೋರಾ ಪ್ರದೇಶದ ನಿವಾಸಿ ಜುನೈದ್ ಅಹ್ಮದ್ ತನ್ನ ಮನೆಯ ಮುಖ್ಯ ಪ್ರವೇಶದ್ವಾರದ ಬಳಿ ನಿಂತುಕೊಂಡಿದ್ದ ಸಂದರ್ಭದಲ್ಲಿ ಅಲ್ಲಿ ಪ್ರತಿಭಟನಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆಗಳು ನಡೆಯುತ್ತಿದ್ದವು. ಈ ವೇಳೆ ಭದ್ರತಾ ಪಡೆಗಳು ಗೋಲಿಬಾರ್ ನಡೆಸಿದ್ದು, ಡಝನ್ನಿಗೂ ಅಧಿಕ ಪೆಲೆಟ್‌ಗಳು ಆತನಿಗೆ ಬಡಿದಿದ್ದವು. ತಲೆ ಮತ್ತು ಎದೆಗೆ ಗಂಭೀರ ಗಾಯಗಳಾಗಿದ್ದ ಆತ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿ ರೆಳೆದಿದ್ದಾನೆ.

ಜುನೈದ್ ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಬಾಲಕನ ಶವವನ್ನು ಮನೆಗೆ ತಂದಾಗ ನೂರಾರು ಜನರು ಬೀದಿಗಿಳಿದು ಆತನ ಸಾವಿನ ವಿರುದ್ಧ ಪ್ರತಿಭಟನೆ ನಡೆಸಿದರು. ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜನರು ಜುನೈದ್‌ನ ಮೃತದೇಹದೊಂದಿಗೆ ನಗರದ ಈದಗಾ ಬಳಿಯ ಕಬರಸ್ಥಾನಕ್ಕೆ ಅಂತಿಮ ಮೆರವಣಿಗೆ ಆರಂಭಿಸುತ್ತಿದ್ದಂತೆ ಭದ್ರತಾಪಡೆಗಳು ಅದನ್ನು ತಡೆಯಲು ಪ್ರಯತ್ನಿಸಿದ್ದವು. ಇದು ಇನ್ನಷ್ಟು ಘರ್ಷಣೆಗಳಿಗೆ ಕಾರಣವಾಗಿದ್ದು,ಅಶ್ರುವಾಯು ಮತ್ತು ಪೆಲೆಟ್ ಗನ್ ಪ್ರಯೋಗದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ.

ಕಳೆದ ಜುಲೈನಲ್ಲಿ ಹಿಝ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯ ಹತ್ಯೆ ಬಳಿಕ ಭದ್ರತಾಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗಳಲ್ಲಿ 90ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಸುಮಾರು 10,000 ಜನರು ಗಾಯಗೊಂಡಿದ್ದಾರೆ.

ಪ್ರತ್ಯೇಕತಾವಾದಿಗಳು ನೀಡಿರುವ ಬಂದ್ ಕರೆ ಮತ್ತು ಅಧಿಕೃತ ಕರ್ಫ್ಯೂ ಹೇರಿಕೆಯ ಹಿನ್ನೆಲೆಯಲ್ಲಿ 92ನೇ ದಿನವಾದ ಶನಿವಾರವೂ ಶಾಲಾ-ಕಾಲೇಜುಗಳು, ಅಂಗಡಿ- ಮುಂಗ ಟ್ಟುಗಳು ಮುಚ್ಚಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News