ಜಯಲಲಿತಾ ಅನುಪಸ್ಥಿತಿ: ಶೀಲಾಕೈಯಲ್ಲೀಗ ಆಡಳಿತದ ಚುಕ್ಕಾಣಿ..?

Update: 2016-10-09 14:55 GMT

ಸೆ.22ರಿಂದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆಯಾದರೂ, ಈಗಲೂ ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಿರುವ ಕಾರಣ ಜಯಲಲಿತಾ ಆಸ್ಪತ್ರೆಯಿಂದಲೇ ಸರಕಾರದ ಸಮಗ್ರ ನಿರ್ವಹಣೆ ನಡೆಸುವುದು ಕಷ್ಟವಾಗಲಿದೆ.  ‘ತೇನ ವಿನಾ ತೃಣಮಪಿ ನ ಚಲತೆ’ ಎಂಬಂತೆ ಎಐಡಿಎಂಕೆ ಪರಮೋಚ್ಚ ನಾಯಕಿ ಜಯಲಲಿತಾ ಆಣತಿಯಂತೆಯೇ ಪಕ್ಷದಲ್ಲಿ ಎಲ್ಲವೂ ನಡೆಯುತ್ತದೆ. ರಾಜ್ಯದ ವಿಧಾನಸಭೆಯಲ್ಲಿ ಸಚಿವರು ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ಯೋಜನೆಗಳ ಘೋಷಣೆ ಮಾಡುವುದಿದ್ದರೂ, ಅಥವಾ ಯಾವುದೇ ಪ್ರತಿಕ್ರಿಯೆ ನೀಡುವುದಿದ್ದರೂ ‘ಅಮ್ಮ ಹೇಳಿದಂತೆ’ ಎಂದು ಉಲ್ಲೇಖಿಸಿಯೇ ಘೋಷಿಸುತ್ತಾರೆ. ಯಾವುದಾದರೂ ಜಟಿಲ ಪರಿಸ್ಥಿತಿ ಎದುರಾದಾಗ - ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಎಂಬ ಸಿದ್ಧ ಉತ್ತರ ಇರುತ್ತದೆ.

 ಜಯಲಲಿತಾ ಆಸ್ಪತ್ರೆಗೆ ದಾಖಲಾದ ಬಳಿಕ ತಮಿಳುನಾಡು ಕಾವೇರಿ ಜಲ ವಿವಾದದ ಬಗ್ಗೆ ಕೋರ್ಟಿನಲ್ಲಿ ದಾವೆಯ ವಿಚಾರಣೆ ಸೇರಿದಂತೆ ಹಲವು ಪ್ರಮುಖ ವಿವಾದಗಳನ್ನು ಎದುರಿಸಿದೆ. ಹೊರಜಗತ್ತಿಗೆ ಅಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ತೋರಿಸಿಕೊಳ್ಳಲಾಗುತ್ತಿದೆ. ಹಾಗಾದರೆ, ಮುಖ್ಯಮಂತ್ರಿಯ ಅನುಪಸ್ಥಿತಿಯಲ್ಲಿ ಆಡಳಿತ ವ್ಯವಸ್ಥೆಯ ನಿರ್ವಹಣೆ ಮತ್ತು ನಿರ್ಧಾರ ಕೈಗೊಳ್ಳುತ್ತಿರುವವರು ಯಾರು ಎಂಬ ಕುತೂಹಲ ಇಲ್ಲಿ ಮೂಡುತ್ತದೆ. ಈ ಸನ್ನಿವೇಶದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶೀಲಾ ಬಾಲಕೃಷ್ಣನ್ ಅವರತ್ತ ಎಲ್ಲರ ಗಮನ ಹರಿಯುತ್ತದೆ. ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರು, ಶೀಲಾ ಬಾಲಕೃಷ್ಣನ್ ಮತ್ತು ವಿ.ಶಶಿಕಲಾ(ಜಯಲಲಿತಾರ ಸ್ನೇಹಿತೆ) ಅವರಿಬ್ಬರು ಜಯಲಲಿತಾರ ನೆರಳು ಎಂದು ಬಣ್ಣಿಸಿದ್ದರು.

ಜಯಲಲಿತಾ ಅಪೋಲೊ ಆಸ್ಪತ್ರೆಗೆ ದಾಖಲಾದ ಬಳಿಕ ಆಸ್ಪತ್ರೆಯ ಒಂದು ಕೊಠಡಿಯಲ್ಲೇ ಉಳಿದುಕೊಂಡಿರುವ ಶೀಲಾ, ಅಲ್ಲಿಂದಲೇ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ‘‘ಶೀಲಾ ಬಾಲಕೃಷ್ಣನ್ ಅವರು ಜಯಲಲಿತಾರ ನಿಷ್ಠಾವಂತ ಬೆಂಬಲಿಗರಾಗಿದ್ದರು ಮತ್ತು ಆಡಳಿತ ನಿರ್ವಹಣೆಯ ವಿಷಯದಲ್ಲಿ ಅವರ ‘ಕಣ್ಣು ಮತ್ತು ಕಿವಿ’ಯಾಗಿದ್ದರು ’’ಎನ್ನುತ್ತಾರೆ ಶೀಲಾರ ಜೊತೆ ಈ ಹಿಂದೆ ಕಾರ್ಯನಿರ್ವಹಿಸಿದ ಕೆಲ ನಿವೃತ್ತ ಅಧಿಕಾರಿಗಳು. ‘‘1976ರ ಬ್ಯಾಚ್‌ನ ಆಫೀಸರ್ ಆಗಿರುವ ಶೀಲಾ, ತನ್ನ 22ರ ಹರೆಯದಲ್ಲೇ ಐಎಎಸ್ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದರು. ತಮ್ಮ ಪ್ರಥಮ ಯತ್ನದಲ್ಲೇ ಯಶ ಕಂಡಿದ್ದು ಈಕೆಯ ಬುದ್ಧಿವಂತಿಕೆಗೆ ನಿದರ್ಶನವಾಗಿತ್ತು’’ ಎಂದು ಈ ಅಧಿಕಾರಿಗಳು ಹೇಳುತ್ತಾರೆ. ಎಂ.ಜಿ. ರಾಮಚಂದ್ರನ್ ಅವರು ಮುಖ್ಯಮಂತ್ರಿಯಾಗಿದ್ದಾಗ 1983ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರನ್ನಾಗಿ ಶೀಲಾರನ್ನು ನೇಮಿಸಿದ್ದರು. ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಐಎಎಸ್ ಅಧಿಕಾರಿಗಳು ತಾವು ನಿಷ್ಠರಾಗಿರುವ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳುತ್ತಾರೆ. ಡಿಎಂಕೆ ಅಧಿಕಾರದ ಸಂದರ್ಭ ಉನ್ನತ ಹುದ್ದೆಗೇರುವ ಅಧಿಕಾರಿಗಳನ್ನು ಎಐಎಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದಾಗ ಮೂಲೆಗುಂಪು ಮಾಡಲಾಗುತ್ತದೆ. ಆದರೆ ಶೀಲಾರ ವಿಷಯದಲ್ಲಿ ಹೆಚ್ಚಿನ ಸಂದರ್ಭದಲ್ಲಿ ಹೀಗೆ ಆಗಿರಲಿಲ್ಲ. 2000ನೆ ಇಸವಿಯಲ್ಲಿ ಡಿಎಂಕೆ ಅಧಿಕಾರದಲ್ಲಿದ್ದಾಗ ಕೂಡಾ ಈಕೆ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿಯೇ ಇದ್ದರು.

ಭ್ರಷ್ಟಾಚಾರ ಆರೋಪದಿಂದ ಮುಕ್ತರಾದ ಜಯಲಲಿತಾ 2002ರಲ್ಲಿ ಮರಳಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಾಗ ಭಾರೀ ಬದಲಾವಣೆ ಸಂಭವಿಸಿತು. ಶೀಲಾ ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ನೇಮಕವಾದರು. ಬಹುತೇಕ ಸಂದರ್ಭ ಗಳಲ್ಲಿ ಈ ಸ್ಥಾನ ಸರಕಾರದ ನಂಬಿಕಸ್ಥ ಅಧಿಕಾರಿಗಳಿಗೆ ಮೀಸಲಾಗಿ ರುತ್ತದೆ. ಹೀಗೆ ಪ್ರಮುಖ ಹುದ್ದೆಗೆ ಏರಿದ ಬಳಿಕ ಅವರು ಕೂಡಾ ರಾಜಕೀಯ ಕೃಪಾಪೋಷಿತ ಎಂಬ ಮುದ್ರೆಯಿಂದ ತಪ್ಪಿಸಿಕೊಳ್ಳಲಾ ಗಲಿಲ್ಲ. ಪರಿಣಾಮ 2006ರಲ್ಲಿ ಡಿಎಂಕೆ ಮರಳಿ ಅಧಿಕಾರಕ್ಕೆ ಬಂದಾಗ ಶೀಲಾರನ್ನು ಮೂಲೆಗುಂಪು ಮಾಡಿ ಶೈಕ್ಷಣಿಕ ಸಂಸ್ಥೆಯೊಂದರ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. 2012ರಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಹುದ್ದೆ ಖಾಲಿಯಿದ್ದಾಗ ಹಿರಿಯ ಐಎಎಸ್ ಅಧಿಕಾರಿ ಬಾಲಕೃಷ್ಣನ್ ಅವರ ಹೆಸರು ಕೇಳಿಬಂದಿತ್ತು. ಆದರೆ ಜಯಲಲಿತಾ ಬಾಲಕೃಷ್ಣನ್‌ರ ಪತ್ನಿ ಶೀಲಾರನ್ನು ಆಯ್ಕೆ ಮಾಡಿದರು. ಇವರ ಕಾರ್ಯವೈಖರಿಯಿಂದ ಖುಷಿಗೊಂಡ ಜಯಲಲಿತಾ, ಶೀಲಾ 2014ರಲ್ಲಿ ಐಎಎಸ್ ಹುದ್ದೆಯಿಂದ ನಿವೃತ್ತರಾಗು ತ್ತಿದ್ದಂತೆಯೇ ಅವರನ್ನು ಸರಕಾರದ ಮುಖ್ಯ ಸಲಹೆೆಗಾರರನ್ನಾಗಿ ನೇಮಿಸಿದರು. ಪ್ರಸ್ತುತ ಶೀಲಾ ಈ ಹುದ್ದೆಯಲ್ಲೇ ಇದ್ದಾರೆ. ಪ್ರಸಿದ್ಧಿಗೆ ಬರಬೇಕೆಂಬ ಅಪೇಕ್ಷೆ ಇರದಿರುವುದೇ ಶೀಲಾರ ಪ್ರಧಾನ ಸಾಮರ್ಥ್ಯ ಎನ್ನುತ್ತಾರೆ ಓರ್ವ ನಿವೃತ್ತ ಐಎಎಸ್ ಅಧಿಕಾರಿ. ಕಳೆದ 3 ವರ್ಷಗಳಿಂದ ಸರಕಾರದ ಬಹುತೇಕ ಎಲ್ಲಾ ಪ್ರಮುಖ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ ಶೀಲಾ. ಜಯಲಲಿತಾರ ಮನದಿಂಗಿತವನ್ನು ಸರಿಯಾಗಿ ಅರ್ಥಮಾಡಿಕೊಂಡವರು. ನಿರ್ಧಾರ ಕೈಗೊಳ್ಳುವುದಲ್ಲ - ಸಲಹೆ ಕೊಡುವುದು ಇದು ಈಕೆಯ ಸರಳ ಕಾರ್ಯವಿಧಾನ.  ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಹೊಂದಿರುವುದು ಈಕೆಗಿರುವ ಮತ್ತೊಂದು ಪ್ಲಸ್‌ಪಾಯಿಂಟ್. ಅಧಿಕಾರಿಗಳ ಸಭೆ ನಡೆಸಿದ ಬಳಿಕ ಜಯಲಲಿತಾರ ಅನುಮತಿ ಪಡೆಯದೆ ಯಾವುದೇ ನಿರ್ಧಾರ ಕೈಗೊಳ್ಳರು. ಅಧಿಕಾರಿಗಳ ಸ್ಥಾನಪಲ್ಲಟ ಮಾಡುವುದಕ್ಕೆ ಹೆಸರಾದ ಜಯಲಲಿತಾ, ಶೀಲಾರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿರುವುದು ಆಕೆಯ ಮೇಲಿರುವ ನಂಬಿಕೆಯ ದ್ಯೋತಕವಾಗಿದೆ ಎನ್ನಲಾಗುತ್ತಿದೆ. ಇದೀಗ ಪಕ್ಷದಲ್ಲಿ ಉಪನಾಯಕರ ಹುದ್ದೆ ಇರದಿರುವ ಕಾರಣ ಶೀಲಾ ಬಾಲಕೃಷ್ಣನ್‌ರಂತಹ ನಂಬಿಕಸ್ಥ ಅಧಿಕಾರಿಗಳನ್ನೇ ಜಯಲಲಿತಾ ನೆಚ್ಚಿಕೊಳ್ಳುವ ಸಂಭವವಿದೆ . ಜಯಲಲಿತಾ ಸರಕಾರ ಜಾರಿಗೆ ತಂದಿರುವ ಜನಪ್ರಿಯ ‘ಅಮ್ಮ’ ಬ್ರಾಂಡ್‌ನ ಸರಣಿ ಕಾರ್ಯಕ್ರಮಗಳ ಹಿಂದೆ ಶೀಲಾರ ಯೋಚನೆಯಿದೆ ಎನ್ನಲಾಗುತ್ತಿದೆ.

             ಆದರೆ ಕಾನೂನು ಪ್ರಕಾರ ಮುಖ್ಯ ಸಲಹೆಗಾರರ ಹುದ್ದೆ ಸರಕಾರದ ಪ್ರಧಾನ ಕಾರ್ಯದರ್ಶಿಗಿಂತ ಕೆಳಮಟ್ಟದ್ದು. ಈ ಹಿನ್ನೆಲೆಯಲ್ಲಿ ಶೀಲಾರ ಅಧಿಕಾರದ ಬಗ್ಗೆ ಸಾರ್ವಜನಿಕವಾಗಿ ಅಥವಾ ಆಡಳಿತಾತ್ಮಕವಾಗಿ ಏನನ್ನೂ ಹೇಳುವಂತಿಲ್ಲ. ಐಎಎಸ್ ಅಧಿಕಾರಿಗಳು ತಾವು ನಿರ್ವಹಿಸಿದ ಕಾರ್ಯಕ್ಕೆ ಜವಾಬ್ದಾರರಾಗುವ ಕಾರಣ ತಪ್ಪಾಗಿದ್ದರೆ ಅವರನ್ನು ಶಿಕ್ಷೆಗೆ ಗುರಿಪಡಿಸಬಹುದು. ಆದರೆ ಸಲಹೆಗಾರರು ಎಂಬ ಉನ್ನತ ಅಧಿಕಾರದ ಲ್ಲಿರುವ ನಿವೃತ್ತ ಐಎಎಸ್ ಅಧಿಕಾರಿಗಳು ಕಾನೂನು ಉಲ್ಲಂಘಿಸಿದರೆ ಅವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಎಲ್ಲೂ ಉಲ್ಲೇಖವಾಗಿಲ್ಲ. ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಈ ಬಗ್ಗೆ ಕೂಡಲೇ ನಿರ್ಧಾರ ಕೈಗೊಳ್ಳಬೇಕಿದೆ ಎನ್ನುತ್ತಾರೆ ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ. ದೇವಸಗಾಯಂ ಅವರು.

Writer - ಶೃತಿಸಾಗರ್ ಯಮುನನ್

contributor

Editor - ಶೃತಿಸಾಗರ್ ಯಮುನನ್

contributor

Similar News