ಅಂತಿಮ ಟೆಸ್ಟ್: ಕಿವೀಸ್‌ಗೆ ಅಶ್ವಿನ್ ಪ್ರಹಾರ,ನ್ಯೂಝಿಲೆಂಡ್ 299ಕ್ಕೆ ಆಲೌಟ್

Update: 2016-10-10 12:39 GMT

ಇಂದೋರ್, ಅ.10: ಇಲ್ಲಿ ನಡೆಯುತ್ತಿರುವ ಮೂರನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದಾಳಿಗೆ ಸಿಲುಕಿದ ನ್ಯೂಝಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 90.2 ಓವರ್‌ಗಳಲ್ಲಿ 299 ರನ್‌ಗಳಿಗೆ ಆಲೌಟಾಗಿದೆ.
 ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೆ ದಿನದ ಆಟ ನಿಂತಾಗ ಭಾರತ ಎರಡನೆ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 6 ಓವರ್‌ಗಳಲ್ಲಿ 18 ರನ್ ಗಳಿಸಿದೆ.
ಆರಂಭಿಕ ದಾಂಡಿಗ ಮುರಳಿ ವಿಜಯ್ ಔಟಾಗದೆ 11 ಮತ್ತು ಚೇತೇಶ್ವರ ಪೂಜಾರ 1 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
   ಮುರಳಿ ವಿಜಯ್ ಜೊತೆ ಇನಿಂಗ್ಸ್ ಆರಂಭಿಸಿದ ಗೌತಮ್ ಗಂಭೀರ್ 6 ರನ್ ಗಳಿಸಿದ್ದಾಗ ಭುಜನೋವು ಕಾಣಿಸಿಕೊಂಡು ಕ್ರೀಸ್‌ನಿಂದ ಹೊರ ನಡೆದರು.

ನ್ಯೂಝಿಲೆಂಡ್ 299: ರವಿವಾರ ನ್ಯೂಝಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 9 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿತ್ತು. ಆರಂಭಿಕ ದಾಂಡಿಗರಾದ ಮಾರ್ಟಿನ್ ಗಪ್ಟಿಲ್ 17 ರನ್ ಮತ್ತು ಟಿಮ್ ಲಥಾಮ್ 6 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಇಂದು ಲಥಾಮ್ ಮತ್ತು ಗಪ್ಟಿಲ್ ಬ್ಯಾಟಿಂಗ್ ಮುಂದುವರಿಸಿದರು.ಮೊದಲ ವಿಕೆಟ್‌ಗೆ 118 ರನ್‌ಗಳ ಜೊತೆಯಾಟ ನೀಡಿದರು. ಅರ್ಧಶತಕ ದಾಖಲಿಸಿದ ಲಥಾಮ್(53) ಅವರು ಅಶ್ವಿನ್ ಎಸೆತದಲ್ಲಿ ರಿಟರ್ನ್ ಕ್ಯಾಚ್ ನೀಡುವುದರೊಂದಿಗೆ ನ್ಯೂಝಿಲೆಂಡ್‌ನ ಮೊದಲ ವಿಕೆಟ್ ಪತನಗೊಂಡಿತು.ಬಳಿಕ ವಿಲಿಯಮ್ಸನ್(8), ರಾಸ್ ಟೇಲರ್(0) ಮತ್ತು ರೊಂಚಿ(0) ಅವರನ್ನು ಪೆವಿಲಿಯನ್‌ಗೆ ಅಟ್ಟಿದ ಅಶ್ವಿನ್ ಅವರು ಒಂದು ತುದಿಯಲ್ಲಿ ವಿಕೆಟ್ ಉರುಳುತ್ತಿದ್ದರೂ , ಇನ್ನೊಂದು ತುದಿಯಲ್ಲಿ ಗುಡುಗುತ್ತಿದ್ದ ಗಪ್ಟಿಲ್(72) ಅವರನ್ನು ರನೌಟ್ ಮಾಡಿದರು.
 ನಿಶಮ್ ಮತ್ತು ವಾಟ್ಲಿಂಗ್ 6ನೆ ವಿಕೆಟ್‌ಗೆ 53 ರನ್‌ಗಳ ಜೊತೆಯಾಟ ನೀಡಿ ಸ್ಕೋರ್‌ನ್ನು 63 ಓವರ್‌ಗಳಲ್ಲಿ 201ಕ್ಕೆ ತಲುಪಿಸಿದರು. ವಾಟ್ಲಿಂಗ್ 23 ರನ್ ಗಳಿಸಿ ಜಡೇಜ ಎಸೆತದಲ್ಲಿ ರಹಾನೆಗೆ ಕ್ಯಾಚ್ ನೀಡಿದರು.
ವಾಟ್ಲಿಂಗ್ ನಿರ್ಗಮನದ ಬಳಿಕ ಸ್ಯಾಂಟ್ನೆರ್ ಅವರು ನಿಶಮ್‌ಗೆ ಜೊತೆಯಾದರು. ಅವರ ಮೂಲಕ ಏಳನೆ ವಿಕೆಟ್‌ಗೆ 52 ಸೇರ್ಪಡೆಗೊಂಡಿತು. ಸ್ಯಾಂಟ್ನೆರ್(22) ಅವರು ಜಡೇಜಗೆ ವಿಕೆಟ್ ಒಪ್ಪಿಸಿದರು.
 ನಿಶಮ್ 71 ರನ್(115ಎ, 11ಬೌ) ಗಳಿಸಿದ್ದಾಗ ಅವರನ್ನು ಅಶ್ವಿನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಬಳಿಕ ಜೀತನ್ ಪಟೇಲ್(18),ಹೆನ್ರಿ (ಔಟಾಗದೆ 15) ಎರಡಂಕೆಯ ಸ್ಕೋರ್ ದಾಖಲಿಸಿದರು. ಟ್ರೆಂಟ್ ಬೌಲ್ಟ್(0) ಅವರನ್ನು ಖಾತೆ ತೆರೆಯಲು ಅವಕಾಶ ನೀಡಿದೆ ಪೆವಿಲಿಯನ್‌ಗೆ ಕಳುಹಿಸಿದ ಅಶ್ವಿನ್ ನ್ಯೂಝಿಲೆಂಡ್‌ನ್ನು 299ಕ್ಕೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಶ್ವಿನ್ 81ಕ್ಕೆ 6 ವಿಕೆಟ್ ಮತ್ತು ಜಡೇಜ 80ಕ್ಕೆ 2 ವಿಕೆಟ್ ಉಡಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News